SUDDIKSHANA KANNADA NEWS/ DAVANAGERE/ DATE:13-04-2025
ದಾವಣಗೆರೆ: ರೈಲು, ಬಸ್ಸಿಗೆ ಬೆಂಕಿ ಇಡಬೇಕು, ದಂಗೆ ಏಳಬೇಕು, ಸಾಯಲು ತಯಾರಾಗಬೇಕು ಎಂಬ ಪ್ರಚೋದನಾತ್ಮಕ ವಿಡಿಯೋ ಹರಿಬಿಟ್ಟಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯ ಕಬೀರ್ ಖಾನ್ ಅಲಿಯಾಸ್ ಕಬೀರ್ ಅಹ್ಮದ್ ಖಾನ್ ರಾಜಸ್ತಾನದ ಅಜ್ಮೀರ್ ನಲ್ಲಿ ಪೊಲೀಸರಿಗೆ ಬಲೆಗೆ ಬಿದ್ದಿದ್ದಾನೆ.
ಕಳೆದ ಕೆಲವು ದಿನಗಳ ಹಿಂದೆ ವಕ್ಫ್ ತಿದ್ದುಪಡಿ ಮಸೂದೆ ಕುರಿತಂತೆ ಪ್ರಚೋದನಕಾರಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಸಾಮರಸ್ಯಕ್ಕೆ ಧಕ್ಕೆ ತರುವ ವಿಡಿಯೋ ಹರಿಬಿಟ್ಟಿದ್ದ ಕಬೀರ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಕೆಂಡಕಾರಿತ್ತು. ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿತ್ತು. ವಿಡಿಯೋ ವೈರಲ್ ಆಗಿ ಆಕ್ರೋಶದ ಜ್ವಾಲೆ ಭುಗಿಲೇಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಆರೋಪಿ ಪರಾರಿಯಾಗಿದ್ದ.
ಪೊಲೀಸರು ಕೂಡ ಅಲರ್ಟ್ ಆಗಿದ್ದರೂ ಸಿಕ್ಕಿರಲಿಲ್ಲ. ರಾಜಸ್ತಾನದ ಅಜ್ಮೀರ್ ನಲ್ಲಿ ಇರುವ ಕುರಿತಂತೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಈಗಾಗಲೇ ವಶಕ್ಕೆ ಪಡೆದು ದಾವಣಗೆರೆಗೆ ಕರೆ ತರಲಾಗಿದೆ. ವಿಡಿಯೋ ಹರಿಬಿಟ್ಟ ಕುರಿತಂತೆ ಮಾಹಿತಿಯನ್ನೂ ಆರೋಪಿಯಿಂದ ಕಲೆ ಹಾಕಲಾಗುತ್ತಿದೆ.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ನಿರ್ದೇಶನದಂತೆ ಅಜ್ಮೀರ್ ತೆರಳಿದ ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಪಿಯನ್ನು ಸೆರೆ ಹಿಡಿದು ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೋದಲ್ಲಿ ಹೇಳಿದ್ದೇನು…?
ವಕ್ಫ್ ಮಸೂದೆ ತಿದ್ದುಪಡಿ ಒಪ್ಪಲು ಸಾಧ್ಯವಿಲ್ಲ. ಕೇವಲ ಪ್ರತಿಭಟನೆ ನಡೆಸಿದರೆ, ಬ್ಯಾನರ್ ಹಿಡಿದು ಓಡಾಡಿದರೆ ಏನೂ ಆಗಲ್ಲ. ಸಿಎಂ, ಡಿಸಿಎಂ, ಡಿಸಿಗೆ ಮನವಿ ಕೊಟ್ಟರೆ ಬೇಡಿಕೆ ಈಡೇರಲ್ಲ. ಎಲ್ಲರೂ ರಸ್ತೆಗೆ ಇಳಿಯಬೇಕು. ಏನ್ ಬೇಕಾದರೂ ಮಾಡಿ. ಬೆಂಕಿ ಇಡಿ, ಸಾಯಿರಿ. ಜೀವ ಬಲಿ ಕೊಡಬೇಕು ಎಂದು ಹೇಳಿದ್ದ.
ಗ್ರಾಮದಲ್ಲಿ 10ರಿಂದ 15 ಜನ ಸಾಯಬೇಕು. ತಲೆಹೊಡೆಯೋ ಕೆಲಸ ಮಾಡಬೇಕು. ಬಸ್ ಗೆ, ರೈಲಿಗೆ ಬೆಂಕಿ ಇಡಬೇಕು. ಕೆಲವನ್ನು ಹೇಳದೆಯೇ ಮಾಡಬೇಕು. ಯೋಜನೆ ರೂಪಿಸಿ ಮಾಡುವುದಲ್ಲ. ಊರಿನ ಪ್ರಮುಖರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಭಾರತದಲ್ಲಿ ನಮಗೆ ಯಾವ ನಾಯಕ ಇಲ್ಲ. ನಾಯಕನೆಂದುಕೊಂಡಿದ್ದರೂ ಒಪ್ಪಲು ಆಗುತ್ತಿಲ್ಲ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಬಂದ್ ಮಾಡಿ, ಬೆಂಕಿ ಇಡಿ, ಒಡೆದು ಹಾಕಿ, ಮುರಿದು ಹಾಕಿ. ಏನೇ ಆದರೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸಮಯಕ್ಕೆ ದೊಡ್ಡವರು ಬೆಂಬಲವಾಗಿ ನಿಲ್ತಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದ.