SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ಎರಡು ಪ್ರಕರಣಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಆರು ವರ್ಷ ಶಿಕ್ಷೆ ಹಾಗೂ 45 ಸಾವಿರ ರೂಪಾಯಿ ದಂಡ ವಿಧಿಸಿ ದಾವಣಗೆರೆ 3 ನೇ ಹೆಚ್ಚುವರಿ ಸಿಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ತೀರ್ಪು ನೀಡಿದೆ.
ಭಗತ್ ಸಿಂಗ್ ನಗರದ ಚೌಡೇಶ್ವರಿ ದೇವಸ್ಥಾನ ಪಕ್ಕದ ವಾಸಿ ಮಾಲತೇಶ್ ಎಂ. ಬಿ. ಬಾರಿಕರ್ (40) ಶಿಕ್ಷೆಗೊಳಪಟ್ಟವನು.
ಪ್ರಕರಣ-1:
2017ರ ನವೆಂಬರ್ 29ರಂದು ನ್ಯಾಯಾಲಯದ ಕರ್ತವ್ಯ ಸಿಬ್ಬಂದಿ ಮಲ್ಲೇಶಪ್ಪ ಅವರು ಠಾಣೆಗೆ ಹಾಜರಾಗಿ ಪಿಸಿಆರ್‌ನಂ:219/2017 ನ್ನು ನೀಡಿದ್ದು ಪರಿಶೀಲಿಸಿ ನೋಡಲಾಗಿ ದೂರುದಾರ ಎಂ.ಕೆ. ತಿಪ್ಪೇಸ್ವಾಮಿ ಅವರಿಗೆ ಆರೋಪಿಗಳಾದ ಮಾಲತೇಶ್, ಉಷಾ, ಎಂ. ಜಿ. ಚೌಹಾಣ್ ರವರು ನಮ್ಮ ಹಿಂದೂಸ್ತಾನ್ ಯುನಿಲೀವರ್ ಲಿ, ಬಾಂಬೆ ಸಂಸ್ಥೆಯಲ್ಲಿ ಹಣವನ್ನು ತೊಡಗಿಸಿದರೆ ಶೇ.4ರಷ್ಟು ಲಾಭಾಂಶವನ್ನು ನೀಡುವುದಾಗಿ ಹೇಳಿ ರೂ. 10,20,000 ಹಣವನ್ನು ತೊಡಗಿಸಿಕೊಂಡು ಮೋಸ ಮಾಡಿದ್ದಾರೆಂದು ದೂರು ನೀಡಿದ್ದರು. ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ-2:
ಇನ್ನು ಮತ್ತೊಂದು ಪ್ರಕರಣವು 2017ರ ಡಿಸೆಂಬರ್ 2 ರಂದು ಪಿರ‍್ಯಾದಿ ಭಗತ್ ಸಿಂಗ್ ನಗರ ವಾಸಿ ಸುನೀಲ್ ಅಹ್ಮದ್ ಅವರಿಗೂ ಆರೋಪಿಗಳು ಮೊದಲ ಪ್ರಕರಣದಂತೆ ಶೇ.4 ರಷ್ಟು ಲಾಭಾಂಶ ನೀಡುವುದಾಗಿ ಹೇಳಿ 19 ಲಕ್ಷ ಹಣ ಪಡೆದಿದ್ದರು. ಕ್ರಮ ಕೈಗೊಳ್ಳುವಂತೆ ಕೆಟಿಜೆ ನಗರ ಪೊಲೀಸರಿಗೆ ದೂರು ನೀಡಿದ್ದರು. ತನಿಖಾಧಿಕಾರಿ ಪ್ರಭು .ಡಿ ಕೆಳಗಿನಮನಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಈ ಎರಡು ಪ್ರಕರಣಗಳ ವಿಚಾರಣೆಯನ್ನು ಘನ 3 ನೇ ಹೆಚ್ಚುವರಿ ಸಿಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದರಾಜು ಎನ್ ಕೆ ಅವರು ಪ್ರಕರಣದ ಮೊದಲ ಆರೋಪಿ ಮಾಲತೇಶ್ ಎಂ. ಬಿ. ಬಾರಿಕರ್ (40) ಮೇಲೆ ಆರೋಪ ಸಾಬೀತಾಗಿದ್ದರಿಂದ 2 ಪ್ರಕರಣಗಳಲ್ಲಿ ತಲಾ 3 ವರ್ಷದಂತೆ ಒಟ್ಟು 6 ವರ್ಷ ಶಿಕ್ಷೆ ಮತ್ತು 45,000ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಪಿರ‍್ಯಾದಿಯವರ ಪರ ಸರ್ಕಾರಿ ವಕೀಲ ಚಿತ್ರಶೇಖರಪ್ಪ ಬಿ. ಡಿ. ಅವರು ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿಯಾದ ಪ್ರಭು .ಡಿ ಕೆಳಗಿನಮನಿ ಮತ್ತು ಸಿಬ್ಬಂದಿ, ಸರ್ಕಾರಿ ವಕೀಲ ಚಿತ್ರಶೇಖರಪ್ಪ ಬಿ. ಡಿ.
ಅವರನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ್ ಅವರು ಶ್ಲಾಘಿಸಿದ್ದಾರೆ.