SUDDIKSHANA KANNADA NEWS/ DAVANAGERE/ DATE:25-10-2023
ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ., ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಅಧಿಕಾರಿ-ಸಿಬ್ಬಂಧಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಕ್ಟೋಬರ್ 28 ಮತ್ತು 29ರಂದು ರಾಜ್ಯದಾದ್ಯಂತ ಪರೀಕ್ಷೆಗಳನ್ನು ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ.
ಶಿವಮೊಗ್ಗ ಜಿಲ್ಲೆಯ 3 ತಾಲೂಕುಗಳ ಒಟ್ಟು 35ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಅಗತ್ಯ ಮುಂಗಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಹಳೇ ಕಚೇರಿ ಕಟ್ಟಡದಲ್ಲಿ ಪರೀಕ್ಷೆಗೆ ನಿಯೋಜಿತರಾಗಿದ್ದ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಮೇಲ್ವಿಚಾರಕರಿಗಾಗಿ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.
ಅಕ್ಟೋಬರ್ 28ರಂದು ನಗರದ 20ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಿಗ್ಗೆ 10.30ರಿಂದ ನಡೆಯುವ ಅಧಿವೇಶನದಲ್ಲಿ 6945 ಪರೀಕ್ಷಾರ್ಥಿಗಳು ಹಾಗೂ ಮಧ್ಯಾಹ್ನ 2.30ರಿಂದ ನಡೆಯುವ 2ನೇ ಅಧಿವೇಶನದಲ್ಲಿ 7,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಕ್ಟೋಬರ್ 29ರಂದು ಶಿವಮೊಗ್ಗದ 24, ಭದ್ರಾವತಿ-06, ಸಾಗರ-02 ಮತ್ತು ಶಿಕಾರಿಪುರ-03 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದು, ಅಂದು ಮೊದಲ ಅಧಿವೇಶನದಲ್ಲಿ 12,616 ಪರೀಕ್ಷಾರ್ಥಿಗಳು ಹಾಗೂ ಮಧ್ಯಾಹ್ನದ 2ನೇ ಅಧಿವೇಶನದಲ್ಲಿ 12,534 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ನಡೆಯುವ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯ ಸಹಯೋಗ ಪಡೆದುಕೊಳ್ಳಲಾಗುವುದು. ಪ್ರತಿ ಕೇಂದ್ರಕ್ಕೆ ವೀಕ್ಷಕರಾಗಿ ಎ ಶ್ರೇಣಿಯ ಅಧಿಕಾರಿಯನ್ನು, ಪ್ರಶ್ನೆ ಪತ್ರಿಕಾ ಪಾಲಕರನ್ನಾಗಿ ಒರ್ವ ಪ್ರಾಂಶುಪಾಲರನ್ನು ಹಾಗೂ ಓರ್ವ ಉಪನ್ಯಾಸಕರನ್ನು ಜಾಗೃತದಳದ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಲ್ಲದೇ ಎಲ್ಲಾ ಪರೀಕ್ಷಾ ಕೇಂದ್ರಗಳ ಸೂಕ್ತ ನಿರ್ವಹಣೆಗಾಗಿ 10 ತ್ರಿಸದಸ್ಯ ಸಮಿತಿಗಳನ್ನು ರಚಿಸಿ ಹೊಣೆಗಾರಿಕೆ ನೀಡಲಾಗಿದೆ. ಪರೀಕ್ಷೆ ನಡೆಯುವ ದಿನದಂದು ವಿದ್ಯುತ್ ಅಡಚಣೆಯಾಗದಂತೆ ಗಮನಿಸಲಾಗುವುದು ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಸೆ.144ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗಧಿಪಡಿಸಿದ ಅವಧಿಗೂ ಒಂದು ಗಂಟೆಗಳ ಮುನ್ನ ಪರೀಕ್ಷಾ ಕೇಂದ್ರದಲ್ಲಿದ್ದು, ನಿಯಮಾನುಸಾರ ಪ್ರವೇಶ ಪಡೆಯಬೇಕು. ಹಿಜಾಬ್ ಧರಿಸಿದ ಪರೀಕ್ಷಾರ್ಥಿಗಳು ಸಕಾಲದಲ್ಲಿ ಹಾಜರಿದ್ದು, ತಪಾಸಣೆಗೆ ಒಳಗಾಗಬೇಕು. ಅದಕ್ಕಾಗಿ ಪ್ರತ್ಯೇಕ ಮಹಿಳಾ ಸಿಬ್ಬಂಧಿಗಳನ್ನು ನಿಯೋಜಿಸಲಾಗುವುದು. ನಿಗಧಿತ ಅವಧಿಯ ನಂತರ ಆಗಮಿಸುವ ಪರೀಕ್ಷಾರ್ಥಿಗಳಿಗೆ ಕೇಂದ್ರದ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷೆಗೆ ಆಗಮಿಸುವ ಪ್ರತಿ ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಯುಲೇಟರ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳು ಕೇಂದ್ರದೊಳಕ್ಕೆ ತರುವುದನ್ನು, ಪೂರ್ಣ ತೋಳಿನ ಷರ್ಟ್ ಧರಿಸುವುದನ್ನು, ಶೂ ಹಾಗೂ ಆಭರಣಗಳು ಧರಿಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ಪರೀಕ್ಷಾರ್ಥಿಗಳು ಪರೀಕ್ಷಾ ಪ್ರಾಧಿಕಾರದ ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು.
ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾರ್ಥಿಗಳಲ್ಲದೆ ಇತರೆ ವ್ಯಕ್ತಿಗಳು ಪ್ರವೇಶಿಸುವುದನ್ನು, ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಕೇಂದ್ರದ ಮೇಲ್ವಿಚಾರಕರು, ವಿದ್ಯುತ್, ಶುದ್ಧಗಾಳಿ-ಬೆಳಕು, ಕುಡಿಯುವ ನೀರು, ಶೌಚಾಲಯ, ಪ್ರತಿ ಕೊಠಡಿಗೆ ಗೋಡೆಗಡಿಯಾರ ಸೌಲಭ್ಯ ಹಾಗೂ ಕಣ್ಗಾವಲಿಗಾಗಿ ಕ್ಯಾಮರಾಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿರುವ ಅವರು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೇ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಖಜಾನಾಧಿಕಾರಿ ಶ್ರೀಮತಿ ಹೆಚ್.ಎಸ್.ಸಾವಿತ್ರಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ನಿಯೋಜಿತ ಅಧಿಕಾರಿ-ಸಿಬ್ಬಂದಿ ಹಾಜರಿದ್ದರು.