SUDDIKSHANA KANNADA NEWS/ DAVANAGERE/ DATE:06-02-2024
ದಾವಣಗೆರೆ: ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳ ನಡುವೆ ನಡೆದ ಹೊಡೆದಾಟ ಪ್ರಕರಣ ತಿರುವು ಪಡೆದುಕೊಂಡಿದೆ. ಮಾತ್ರವಲ್ಲ, ಈ ಪ್ರಕರಣ ಕೋರ್ಟ್ ನವರೆಗೂ ಹೋಗಿದೆ. ಮಾತ್ರವಲ್ಲ, ಜೈಲ್ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಮಾದಕ ವಸ್ತು, ಗಾಂಜಾ ಗ್ರಂಥಾಲಯದಲ್ಲಿ ಪತ್ತೆ ಆಗಿರುವುದರಿಂದ ಮತ್ತೆ ರಾಜ್ಯದಲ್ಲಿ ಈ ಪ್ರಕರಣ ಸದ್ದು ಮಾಡಿದೆ. ಮಾತ್ರವಲ್ಲ, ಜೈಲಿನೊಳಗೆ ಎಲ್ಲವೂ ಸಲೀಸು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಉತ್ತರ ಪ್ರದೇಶ ಮೂಲದ ವಿಚಾರಣಾಧೀನ ಖೈದಿ ಮತ್ತು ಸ್ಥಳೀಯ ಖೈದಿಗಳ ನಡುವೆ ಗುಂಪು ಗಲಾಟೆ ಆಗಿತ್ತು. ಇಬ್ಬರು ಖೈದಿಗಳು ಗಾಯಗೊಂಡಿದ್ದರು. ಸಂಜಿತ್ ಸಿಂಗ್, ಬೋಲೆ, ಸುನೀಲ್, ಪವನ್ ಕುಮಾರ್, ಅಭಿಲಾಷ್, ವೆಂಕಟೇಶ್, ರಮೇಶ, ಮಂಜುನಾಥ, ಆಕಾಶ, ಹನುಮಂತ, ಇಮ್ರಾನ್ ಖಾನ್, ಸಲ್ಮಾನ್ ಖಾನ್ ಖೈದಿಗಳ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ವಿಚಾರಣಾಧೀನ ಖೈದಿಗಳ ನಡುವೆ ಕಳೆದ ಮೂರು ದಿನಗಳ ಹಿಂದೆಯಷ್ಟೇ ಜೈಲಿನೊಳಗೆ ಮಾರಾಮಾರಿಯಾಗಿತ್ತು. ಹೊಡೆದಾಟವೂ ಆಗಿತ್ತು. ಈ ವಿಚಾರ ಕುರಿತಂತೆ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಡಿಜಿಪಿ ಅವರಿಗೆ 2024ರ ಫೆಬ್ರವರಿ 3ರಂದು ವರದಿ ಸಲ್ಲಿಸಲಾಗಿತ್ತು. ಇದರಲ್ಲಿ ಮಾದಕ ವಸ್ತುಗಳು, ಗಾಂಜಾ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರ ನೇತೃತ್ವದ ತಂಡವು ಪತ್ತೆ ಹಚ್ಚಿರುವುದು ಈಗ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಜೈಲಿನ ಅಧೀಕ್ಷಕಿ ಭಾಗೀರಥಿ ಸೇರಿದಂತೆ ಮತ್ತಿತರರ ಮೇಲೆ ಎಫ್ ಐ ಆರ್ ಆಗಿದೆ. ಇದೇ ಮೊದಲ ಬಾರಿಗೆ ಜೈಲಿನೊಳಗೆ ಗಲಾಟೆಯಾಗುತ್ತಿಲ್ಲ. ಈ ಹಿಂದೆಯೂ ಆಗಿತ್ತು. ಆದ್ರೆ, ಹೆಚ್ಚು ಪ್ರಚಾರ ಆಗಿರಲಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಡೆದ ಗಲಾಟೆಯು ಸದ್ದು ಮಾಡಿತ್ತು.
ಇನ್ನು ಜೈಲಿನೊಳಗೆ ಗಾಂಜಾ, ಮಾದಕ ವಸ್ತುಗಳು ಹಾಗೂ ಖೈದಿಗಳ ನಡುವಿನ ಹೊಡೆದಾಟ ಸೇರಿದಂತೆ ಇತರೆ ಅಕ್ರಮಗಳನ್ನು ಜೈಲಿನ ಅಧೀಕ್ಷಕರು, ಸಿಬ್ಬಂದಿ ನಿಭಾಯಿಸಬೇಕು. ಜೊತೆಗೆ ಬಿಗಿಯಾದ ಕ್ರಮ ಕೈಗೊಳ್ಳಬೇಕು. ಆದ್ರೆ, ಈ ಕಾರ್ಯ ನಿಭಾಯಿಸುವಲ್ಲಿ ವಿಫಲರಾದ ಕಾರಣಕ್ಕೆ ಈಗ ಕೇಸ್ ದಾಖಲಾಗಿದೆ.
ಹೇಗೆ ಪತ್ತೆಯಾಯ್ತು..?
ಇನ್ನು ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜೈಲಿನಿಂದ ಹೊರ ಬಂದ ಬಳಿಕ ನ್ಯಾಯಾಧೀಶರಿಗೆ ನೇರವಾಗಿ ಕಾರಾಗೃಹದೊಳಗೆ ನಡೆಯುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು. ಜೈಲಿನೊಳಗೆ ಸುಲಭವಾಗಿ ಗಾಂಜಾ, ಮಾದಕ ವಸ್ತುಗಳು ಸಿಗುತ್ತವೆ. ಕೆಲವರಿಗೆ ಐಷಾರಾಮಿ ಟ್ರೀಟ್ ಮೆಂಟ್ ಸಿಗುತ್ತಿದೆ. ಅವರಿಗೆ ಬೇಕಾದ್ದನ್ನೆಲ್ಲಾ ತಂದುಕೊಡುತ್ತಾರೆ. ಗ್ರಂಥಾಲಯದಲ್ಲಿಯೇ ಗಾಂಜಾ, ಮಾದಕ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದ್ದ. ಇದನ್ನು ಆಧರಿಸಿ ದಾಳಿ ನಡೆಸಲಾಗಿತ್ತು.
ಗುಂಪು ಘರ್ಷಣೆಯಲ್ಲಿ ಸುನೀಲ್, ಪವನ್ ಕುಮಾರ್, ಇಮ್ರಾನ್ ಖಾನ್, ಸಲ್ಮಾನ್ ಖಾನ್ ಮಾದಕ ದ್ರವ್ಯ ಸೇವಿಸಿ ಇತರೆ ಖೈದಿಗಳ ಮೇಲೆ ಥಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳ 31ರಂದು ಖೈದಿಗಳ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈ ವರದಿಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ.