SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಪ್ರಸ್ತುತ ಸ್ವಾವಲಂಬಿಯಾಗಿ ಸಿದ್ಧಗೊಳ್ಳುತ್ತಿದೆ. ಇದು 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು 2040ರ ವೇಳೆಗೆ ಚಂದ್ರನ ಮೇಲೆ ಇಳಿಯುವ ಭೂಕಕ್ಷೆಗೆ ಭಾರತೀಯರನ್ನು ಕರೆದೊಯ್ಯುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ, ವಿಜ್ಞಾನಿ ಎ.ಎಸ್.ಕಿರಣಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ನಡೆದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಸ್ವಾತಂತ್ರ್ಯದ ನಂತರ ಭಾರತವು ಉತ್ತಮ ಜೀವನ ಪರಿಸ್ಥಿತಿಗಳನ್ನು
ಒದಗಿಸಲು ಆದ್ಯತೆ ನೀಡಿದೆ. ಜೀವನ ಮಟ್ಟವನ್ನು ಸುಧಾರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಬಳಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದರು.
ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯವನ್ನು ಉನ್ನತೀಕರಿಸಲು ಭಾರತವು ತನ್ನ ಸಂಪನ್ಮೂಲಗಳನ್ನು ಅತ್ಯಂತ ನವೀನ ಮತ್ತು ಪರಿಣಾಮಕಾರಿಯಾಗಿ ಬಳಸಿದೆ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಅತ್ಯಂತ ಸಮರ್ಥ ಶಕ್ತಿಯಾಗಲು ಗುಣಮಟ್ಟ ಮತ್ತು ಸಾಮರ್ಥ್ಯವನ್ನು ವರ್ಧಿಸಲು ತನ್ನನ್ನು ತಾನು ಸಿದ್ಧಪಡಿಸುತ್ತಿದೆ ಎಂದು ಹೇಳಿದರು.
ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾರತ ಎದುರಿಸಿದ ಸಮಸ್ಯೆಗಳು, ಸವಾಲುಗಳು ಹಲವು. ಆದರೆ ಅವೆಲ್ಲವೂ ಸ್ವಾವಲಂಬನೆಯನ್ನು ಸಾಧಿಸಲು ಪ್ರೇರಣೆಯಾದವು. ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ, ಸಂವಹನ, ಪ್ರಸಾರ, ಹವಾಮಾನ ಮೇಲ್ವಿಚಾರಣೆ, ಸಂಪನ್ಮೂಲಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ರಿಮೋಟ್ ಸೆನ್ಸಿಂಗ್, ಆಕಾಶ ವೀಕ್ಷಿಸಲು ಮತ್ತು ನಿರ್ವಹಿಸಲು ಅಗತ್ಯವಿರುವ ಸೂಕ್ತವಾದ ಸಂಪನ್ಮೂಲಗಳನ್ನು ಒದಗಿಸುವಲ್ಲಿನ ತೊಂದರೆಯ ನಡುವೆಯೂ ಸ್ವಸಾಮರ್ಥ್ಯದೊಂದಿಗೆ ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸವಾಲುಗಳು, ಗುರಿಗಳು ದೊಡ್ಡ ಅವಕಾಶಗಳನ್ನು ತೆರೆಯುತ್ತವೆ. ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಮುಂಬರುವ ವರ್ಷಗಳಲ್ಲಿ ಸಾಧನೆಗೆ ವಿವಿಧ ಕ್ಷೇತ್ರಗಳಲ್ಲಿ ವಿಶಾಲವಾದ ಅವಕಾಶಗಳಿವೆ. ಯುವಜನರು ಜ್ಞಾನ, ಕೌಶಲ, ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ಮಾಹಿತಿ ಮತ್ತು ಸಾರಿಗೆ ಸಂಚಾರ ಸಾಗಣೆಯ ವೇಗವನ್ನು ಬದಲಾಯಿಸುತ್ತಿದೆ. ಇದು ಮಾನವನ ಭೂಮಿಯ ಮೇಲಿನ ವಾಸದ ರೀತಿಯಲ್ಲಿ ತಂತ್ರೋನ್ಮಾನ ಬದಲಾವಣೆಗಳೂ ಪ್ರೇರಣೆಯಾಗುತ್ತಿದೆ. ಇದು ಮಾನವನ ಅಂತರ್ಗತ ಪ್ರತಿರೋಧದಿಂದ ಉದ್ಭವಿಸುವ ಸಂಘರ್ಷ ಹೆಚ್ಚಾಗಿ ದೇಹ ಮತ್ತು ಮಾನಸಿಕ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅನಾದಿ ಕಾಲದಿಂದಲೂ ಮಾನವರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಲು, ಜೀವನದ ಅಗತ್ಯಕ್ಕೆ ತಕ್ಕಂತೆ ಆವಿಷ್ಕಾರಗಳ ಮೊರೆ ಹೋಗಿದ್ದಾರೆ. ದೈಹಿಕ ಶಕ್ತಿಗೆ ಅಗತ್ಯವಾಗಿ ಬದುಕಲು ಹೋರಾಟವಿತ್ತು. ಅನಿವಾರ್ಯತೆಗಾಗಿ ಹರಿತವಾದ ಕಲ್ಲು, ಬಿಲ್ಲು, ಬಾಣಗಳು ಮೊದಲಾದ ಸಾಧನಗಳನ್ನು ವಿಕಸನಗೊಳಿಸಿ, ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಂಡರು. ಸಂಚಾರಕ್ಕೆ ಪ್ರಾಣಿಗಳನ್ನು ಬಳಸಿಕೊಂಡ, ಚಾಲಿತ ವಾಹನಗಳನ್ನು ಕಂಡು ಹಿಡಿದ. ಜಲಚರಗಳನ್ನು ಗಮನಿಸಿ, ತೆಪ್ಪ, ದೋಣಿ, ಹಡಗುಗಳನ್ನು ಸಾಧನಗಳನ್ನು ನಿರ್ಮಿಸಿದರು. ದೂರದ ವಸ್ತು ವೀಕ್ಷಿಸಲು ದೂರದರ್ಶಕ, ಚಿಕ್ಕ ವಸ್ತುಗಳನ್ನು ವರ್ಧಿಸಲು ಸೂಕ್ಷ್ಮ ದರ್ಶಕಗಳನ್ನು ಅಭಿವೃದ್ಧಿಪಡಿಸಿದರು. ವಿದ್ಯುತ್ಕಾಂತೀಯ ವಿಕಿರಣದ ಅಗಾಧತೆ ಅರಿತು ದೃಶ್ಯ ಉಪಕರಣಗಳು ಕಂಡುಕೊಂಡವು. ಪ್ರಸ್ತುತ ಅನ್ಯಗ್ರಹಗಳನ್ನು ವೀಕ್ಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವನ ಹುಡುಕಾಟದ ಸಂಶೋಧನೆಯ ಉನ್ನತಿಗೆ ಸಾಕ್ಷಿಯಾಗಿವೆ ಎಂದು ತಿಳಿಸಿದರು.