SUDDIKSHANA KANNADA NEWS/ DAVANAGERE/ DATE:24-10-2024
ಬೆಂಗಳೂರು: ರಾಜ್ಯದಲ್ಲಿ ಹೋಂ ಸ್ಟೇ ನಿರ್ವಹಣೆ ಸಂಬಂಧ ನೂತನ ನೀತಿಯನ್ನು ಮುಂದಿನ ಜನವರಿ-ಫೆಬ್ರವರಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆಗಳು, ಪ್ರವಾಸೋದ್ಯಮ ನೀತಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರಚಾರಾಂದೋಲನ, ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಪ್ರವಾಸಿ ಕ್ಷೇತ್ರದಲ್ಲಿ ತೊಡಗಿರುವ ಪಾಲುಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಸ್ತುತ ರಾಜ್ಯದಲ್ಲಿನ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಿ ರಾಜ್ಯದ ಎಲ್ಲಾ ಪ್ರವಾಸಿ ಸಹಭಾಗಿದಾರರನ್ನು ಒಗ್ಗೂಡಿಸುವ ಸಂಬಂಧ ಮಡಿಕೇರಿ ನಗರ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ಒಂದು ನೀತಿ ಬೇಕಿದೆ ಎಂದು ಹಲವು ದಶಕಗಳಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಹೋಂಸ್ಟೇಗಳಿಗೆ ಹೊಸ ನೀತಿಯನ್ನು ಸರ್ಕಾರ ಘೋಷಿಸಲಿದೆ ಎಂದು ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ಮಾಲೀಕರು ವಾಸಿಸುವ ಸ್ಥಳದಲ್ಲಿಯೇ ಹೋಂಸ್ಟೇಗಳು ಇರುವುದರಿಂದ ಅವುಗಳ ನಿರ್ವಹಣೆ, ನೋಂದಣಿ ಪ್ರಕ್ರಿಯೆ, ಎನ್ಒಸಿ ಪಡೆಯುವುದು ಮತ್ತಿತರ ಮಾರ್ಗಸೂಚಿಯನ್ನು ಹೊಸ ಹೋಸ್ಟೇ ನೀತಿಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ವಿವರಿಸಿದರು.
ಹೋಂಸ್ಟೇಗಳನ್ನು ನೋಂದಣಿ ಮಾಡಿಕೊಂಡು ಪ್ರವಾಸಿಗರಿಗೆ ಉತ್ತಮ ಮೂಲ ಸೌಲಭ್ಯ ಕಲ್ಪಿಸಬೇಕು. ಅಂತಹ ಹೋಂಸ್ಟೇಗಳಿಗೆ ಆದಷ್ಟು ಸಹಕಾರ, ಪ್ರೋತ್ಸಾಹ ನೀಡಲಾಗುವುದು. ಆ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜೇಂದ್ರ ಅವರು ತಿಳಿಸಿದರು.
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಲ್ಲಿ ‘ವೃತ್ತಿ ಕೌಶಲ್ಯ ತರಬೇತಿ’ ಕಾರ್ಯಕ್ರಮವನ್ನು ಹಮ್ಮಿಕೊಂಡು, ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಒತ್ತು ನೀಡಲು ಮುಂದಾಗಲಾಗಿದೆ ಎಂದು ಡಾ.ಕೆ.ವಿ.ರಾಜೇಂದ್ರ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸ್ಥಳೀಯವಾಗಿ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಪ್ರವಾಸೋದ್ಯಮ ಸಾಕಷ್ಟು ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪ್ರತೀ ಜಿಲ್ಲೆಯಲ್ಲೂ ಆಯೋಜಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸರ್ಕಾರಕ್ಕೂ ಆದಾಯ ಬರಲಿದ್ದು, ತೆರಿಗೆ ಸಂಗ್ರಹವಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ. ಆ ನಿಟ್ಟಿನಲ್ಲಿ ಯುವಜನರಿಗೆ ಅವಕಾಶಗಳು ಒದಗಲಿವೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ ಮಾಡುವಲ್ಲಿ ಹೋಂಸ್ಟೇ, ಹೋಟೆಲ್ಗಳು, ಟ್ರಾವೆಲ್ ಹೀಗೆ ಒಂದಕ್ಕೊಂದು ಸಂಬಂಧವಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಆಗಬೇಕಿರುವ ಕೆಲಸಗಳ ಬಗ್ಗೆ ಬೆಳಕು ಚೆಲ್ಲುವಂತಾಗಬೇಕು. ತಮ್ಮ ನಿರೀಕ್ಷೆಗಳು ಏನು, ಭವಿಷ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯವು ಹತ್ತನೇ ಸ್ಥಾನದೊಳಗಿದೆ. ಕೇರಳ, ಗೋವಾ, ತಮಿಳುನಾಡು, ಕರ್ನಾಟಕ ರಾಜ್ಯಗಳು ತಮ್ಮದೇ ಆದ ಸ್ಥಾನ ಪಡೆದಿವೆ. ರಾಜ್ಯದಲ್ಲಿ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೈಸೂರು, ವಿಜಯನಗರದ ಹಂಪಿ, ಕೊಡಗು, ಚಿಕ್ಕಮಗಳೂರು, ವಿಜಯಪುರ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಚಾಮರಾಜನಗರ, ಹೀಗೆ ವಿವಿಧ ಪ್ರವಾಸಿ ಸ್ಥಳಗಳು ಪ್ರವಾಸಿಗರನ್ನು ಆಕರ್ಷಣೀಯಗೊಳಿವೆ ಎಂದು ರಾಜೇಂದ್ರ ಅವರು ವಿವರಿಸಿದರು.
ಸ್ವಾಭಾವಿಕ ಸಂಪನ್ಮೂಲವನ್ನು ಉಳಿಸಿಕೊಂಡು, ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಸೆಳೆಯುವಂತಾಗಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಸೂಕ್ತ ವೇದಿಕೆ ಕಲ್ಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ‘ಕಾಫಿ ಟೇಬಲ್ ಬುಕ್’ನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಸರುವಾಸಿಯಾಗಿದೆ. ಇಲ್ಲಿನ ರಾಜಾಸೀಟು, ಮಾಂದಲ್ ಪಟ್ಟಿ ಪ್ರವಾಸಿ ಸ್ಥಳಗಳು ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಜಲಪಾತಗಳು, ಕಾಫಿ, ಆನೆ ಶಿಬಿರ, ನಗರದ ಕೋಟೆ ಸಹ ಪ್ರಸಿದ್ಧ ತಾಣವಾಗಿದೆ ಎಂದರು. ಪ್ರವಾಸಿ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥೆ ಹೀಗೆ ಮತ್ತಿತರ ‘ಡೆಸ್ಟಿನೇಷನ್ ಟೂರಿಸಂಗೆ’ ಒತ್ತು ನೀಡುವುದು ಅತ್ಯಗತ್ಯವಾಗಿದೆ ಎಂದರು.