ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕಾನೂನು ಬಾಹಿರ ಕಲ್ಲುಗಣಿಗಾರಿಕೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲು

On: April 24, 2025 5:25 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-24-04-2025

ದಾವಣಗೆರೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ನಿಯಮಬದ್ದವಾಗಿ ನಡೆಸುತ್ತಿಲ್ಲ ಎಂಬ ಅನುಮಾನಗಳು ಬರುತ್ತಿದ್ದು ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿರುವ ಶಂಕೆ ಇರುವುದರಿಂದ ಲೋಕಾಯುಕ್ತದಲ್ಲಿ ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತದೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪನವರು ತಿಳಿಸಿದರು.

ಅವರು ದಾವಣಗೆರೆ ತಾಲ್ಲೂಕಿನ ಕುರ್ಕಿ ಬಳಿಯ ಹಿರೇತೊಗಲೇರಿ ಮತ್ತು ಹೆಬ್ಬಾಳ ಬಳಿಯ ಪಂಜೇನಹಳ್ಳಿ ಅರಣ್ಯದಂಚಿನಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ವೀಕ್ಷಣೆ ಮಾಡಿದರು. ಕುರ್ಕಿ ಬಳಿ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದ್ದು ಇಲ್ಲಿ 7 ಕ್ಕೆ ಅನುಮತಿ ನೀಡಲಾದ ಪ್ರದೇಶಕ್ಕಿಂತಲೂ ಹೆಚ್ಚು ಒತ್ತುವರಿ ಮಾಡಿಕೊಳ್ಳಲಾಗಿದೆ. ಬಫರ್ ಝೋನ್ ಬಿಟ್ಟು ಗಣಿಗಾರಿಕೆ ಮಾಡಬೇಕು, ಮತ್ತು ಸಾಗಾಣಿಕೆಗೂ ಸ್ಥಳವನ್ನು ಅನುಮತಿಸಲಾದ ಪ್ರದೇಶಲ್ಲಿಯೇ ಬಿಟ್ಟುಕೊಂಡಿರಬೇಕು. ಆದರೆ ಗಡಿಭಾಗಕ್ಕಿಂತಲೂ ಹೆಚ್ಚುವರಿಯಾಗಿ ಒತ್ತುವರಿಯಾಗಿರುವುದು ಕಂಡು ಬಂದಿರುತ್ತದೆ ಎಂದು ತಿಳಿಸಿದರು.

ಬಫರ್ ಝೋನ್ ಇಲ್ಲದೇ ಸಾಕಷ್ಟು ಆಳವಾಗಿ ಗಣಿಗಾರಿಕೆ ಮಾಡುವುದರಿಂದ ಮತ್ತು ನಿಯಮದನ್ವಯ ಇದಕ್ಕೆ ಯಾವುದೇ ಮಿತಿ ಇಲ್ಲದಿರುವುದರಿಂದ ಪಕ್ಕದಲ್ಲಿನ ಭೂಮಿಯು ಕುಸಿಯುತ್ತದೆ. ಇದರಿಂದ ಸಾಕಷ್ಟು ಪ್ರಕೃತಿಗೆ ತುಂಬಲಾಗದ ನಷ್ಟವಾಗಲಿದೆ. ಇಲಾಖೆ ಅಧಿಕಾರಿಗಳು ಕಾಲ, ಕಾಲಕ್ಕೆ ಗಣಿಗಾರಿಕೆಯನ್ನು ನಿಯಮವಾಗಿ ನಡೆಸಲಾಗುತ್ತಿದೆಯೇ, ನಿಯಮಬಾಹಿರವಾಗಿ ನಡೆಸಲಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಹಿರೇತೊಗಲೇರಿಯಲ್ಲಿ 7 ಕಲ್ಲುಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಕೆಲವು ಕಡೆ 100 ಅಡಿಗಿಂತಲೂ ಹೆಚ್ಚಿನ ಆಳದವರೆಗೆ ಕಲ್ಲುಗಣಿಗಾರಿಕೆ ಮಾಡಲಾಗಿದೆ. ಆದರೆ ಇಷ್ಟು ಆಳದವರೆಗೆ ಗಣಿಗಾರಿಕೆ ಮಾಡಿದಲ್ಲಿ ಮುಂದೆ ಮುಚ್ಚುವುದು ಹೇಗೆ ಎಂಬುದನ್ನು ಅಧಿಕಾರಿಗಳು ಮನಗಾಣಬೇಕಾಗಿದೆ ಎಂದರು.

ಕ್ವಾರಿಯಲ್ಲಿ ಬ್ಲಾಸ್ಟಿಂಗ್:

ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಕೂಡ ಮಾಡಲಾಗುತ್ತಿದೆ, ಆದರೆ ಇದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿನ ಮನೆಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಹಿಂದೆ ಬ್ಲಾಸ್ಟಿಂಗ್ ಮಾಡಬಾರದೆಂದು ಷರತ್ತು ಇರುತ್ತಿತ್ತು. ಉಳಿಯಿಂದ ಕಲ್ಲು ತೆಗೆದಿರುವ ಯಾವುದೇ ಗುರುತು ಇಲ್ಲಿ ಕಾಣುವುದಿಲ್ಲ. ಸಂಪೂರ್ಣವಾಗಿ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಯಾವುದೇ ತೊಂದರೆಯಾದಲ್ಲಿ ಯಾರು ಜವಾಬ್ದಾರರು, ಇದನ್ನು ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಹ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಗಣಿಗಾರಿಕೆ ನಿಯಮಬದ್ದವಾಗಿ ನಡೆಸಿ; ಗಣಿಗಾರಿಕೆಯನ್ನು ಸರ್ಕಾರದ ನಿಯಮಾನುಸಾರವಾಗಿ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ನಿಯಮಬಾಹಿರವಾಗಿ ಷರತ್ತುಗಳನ್ನು ಉಲ್ಲಂಘಿಸಿ ಮಾಡಿದಲ್ಲಿ ಕಠಿಣಕ್ರಮ ಅನಿವಾರ್ಯವಾಗುತ್ತದೆ. ಇದನ್ನು ಅಧಿಕಾರಿಗಳು ತಡೆಯಬೇಕು, ಅಂತಹ ಗಣಿಗಾರಿಕೆಗೆ ನೀಡಿದ ಗುತ್ತಿಗೆ ರದ್ದುಪಡಿಸಬೇಕೆಂದು ಸೂಚನೆ ನೀಡಿದರು.

ಹೆಬ್ಬಾಳ ಬಳಿ ಪಂಜೇನಹಳ್ಳಿಗೆ ಭೇಟಿ; ಹೆಬ್ಬಾಳ ಬಳಿಯ ಪಂಜೇನಹಳ್ಳಿಗೆ ಭೇಟಿ ನೀಡಿ ಅಲ್ಲಿ ಅರಣ್ಯದಂಚಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವೀಕ್ಷಣೆ ಮಾಡಿದರು. ಇಲ್ಲಿ ಕ್ವಾರಿಯನ್ನು ನಿಲ್ಲಿಸಲಾಗಿದ್ದು ಕ್ರಷರ್ ಮಾತ್ರ ನಡೆಯುತ್ತಿದೆ. ಆದರೆ ಗಣಿಗಾರಿಕೆ ನಡೆಸಿದ ಸ್ಥಳವನ್ನು ಮಣ್ಣಿನಿಂದ ಮುಚ್ಚಿ ಗಿಡ, ಮರಗಳನ್ನು ಹಾಕಬೇಕಾಗಿದೆ. ಗಣಿಗಾರಿಕೆ ಮಾಡುವಾಗ ಆಳದವರೆಗೆ ತೆಗೆದಿರುವುದನ್ನು ಪುನರ್ ನಿರ್ಮಾಣ ಮಾಡಬೇಕೆಂಬ ಷರತ್ತು ಇರುತ್ತದೆ. ಆದರೆ ಅಧಿಕಾರಿಗಳು ತಮ್ಮ ಕೆಲಸ ಮಾಡುವುದಿಲ್ಲ, ಬೇರೆ ಕಡೆಗೆ ಅಧಿಕಾರಿಗಳ ವರ್ಗಾವಣೆಯಾಗಿ ಹೋಗುತ್ತಾರೆ ಎಂದು ತಿಳಿಸಿ ಕಡ್ಡಾಯವಾಗಿ ಮೈನಿಂಗ್ ಮಾಲೀಕರಿಂದ ಈ ಕೆಲಸ ಮಾಡಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಪ್ರದೇಶ; ಜಿಲ್ಲೆಯಲ್ಲಿ ಕಲ್ಲು ಗಣಿ ಗುತ್ತಿಗೆಯಡಿ 128 ಕಲ್ಲುಗಣಿ ಗುತ್ತಿಗೆ ನೀಡಿದ್ದು 270.12 ಎಕರೆ ಪ್ರದೇಶವಾಗಿದೆ. ಇದರಲ್ಲಿ ಪ್ರಸ್ತುತ ಪಟ್ಟಾ ಭೂಮಿಯಲ್ಲಿ 75 ಕ್ಕೆ ಅನುಮತಿ ನೀಡಿದ್ದು ಇದಲ್ಲಿ 21 ಸ್ಥಗಿತವಾಗಿ 54 ನಡೆಯುತ್ತಿವೆ. ಸರ್ಕಾರಿ ಜಾಗದಲ್ಲಿ 53 ಕ್ಕೆ ಅನುಮತಿ ನೀಡಿದ್ದು ಇದರಲ್ಲಿ 21 ಸ್ಥಗಿತವಾಗಿ 32 ನಡೆಯುತ್ತಿವೆ ಎಂದು ಹೇಳಿದರು.

ತಾಲ್ಲೂಕುವಾರು ವಿವರದನ್ವಯ; ದಾವಣಗೆರೆ ತಾ; 57 ಕ್ಕೆ 149.35 ಎಕರೆಗೆ ಅನುಮತಿ ನೀಡಿದ್ದು ಪಟ್ಟಾ ಭೂಮಿಯಲ್ಲಿ 44 ರಲ್ಲಿ 14 ಸ್ಥಗಿತವಾಗಿ 30 ನಡೆಯುತ್ತಿವೆ. ಸರ್ಕಾರಿ ಭೂಮಿಯಲ್ಲಿ 13 ರಲ್ಲಿ 9 ನಡೆಯುತ್ತಿವೆ. ಜಗಳೂರು ತಾಲ್ಲೂಕಿನಲ್ಲಿ 4 ಕ್ಕೆ 10.02 ಎಕರೆ ಪ್ರದೇಶಕ್ಕೆ ಅನುಮತಿ ನೀಡಿದ್ದು ಇದರಲ್ಲಿ ಪಟ್ಟಾ ಭೂಮಿಯಲ್ಲಿ 2, ಸರ್ಕಾರಿ ಜಾಗದಲ್ಲಿ ನೀಡಿದ 2 ಸಹ ಸ್ಥಗಿತವಾಗಿವೆ. ಚನ್ನಗಿರಿ ತಾಲ್ಲೂಕಿನಲ್ಲಿ 35 ಕ್ಕೆ 42.32 ಎಕರೆ ವಿಸ್ತೀರ್ಣದಲ್ಲಿ ನೀಡಿದ್ದು ಪಟ್ಟಾ ಭೂಮಿಯಲ್ಲಿ ನೀಡಲಾದ 3 ರಲ್ಲಿ 1 ಸ್ಥಗಿತವಾಗಿದೆ. 32 ಸರ್ಕಾರಿ ಜಾಗದಲ್ಲಿ 14 ಸ್ಥಗಿತವಾಗಿ 18 ನಡೆಯುತ್ತಿವೆ. ಹೊನ್ನಾಳಿ ತಾ; 16 ಕ್ಕೆ 39.21 ಎಕರೆ ನೀಡಿದ್ದು 10 ಪಟ್ಟಾ ಭೂಮಿಯಲ್ಲಿ 3 ಸ್ಥಗಿತ, 7 ನಡೆಯುತ್ತಿವೆ. ಸರ್ಕಾರಿ ಭೂಮಿಯಲ್ಲಿ ನೀಡಲಾದ 6 ರಲ್ಲಿ 1 ಸ್ಥಗಿತವಾಗಿ 5 ನಡೆಯುತ್ತಿವೆ. ನ್ಯಾಮತಿ ತಾ; 16 ಕ್ಕೆ 27.24 ಎಕರೆಗೆ ಗುತ್ತಿಗೆ ನೀಡಿದ್ದು 16 ಪಟ್ಟಾ ಭೂಮಿಯಲ್ಲಿ 3 ಸ್ಥಗಿತವಾಗಿ 13 ನಡೆಯುತ್ತಿವೆ. ಹರಿಹರ ತಾಲ್ಲೂಕಿನಲ್ಲಿ ಯಾವುದೇ ಕಲ್ಲುಗಣಿ ಗುತ್ತಿಗೆ ನೀಡಿರುವುದಿಲ್ಲ.

ಈ ವೇಳೆ ಉಪಲೋಕಾಯುಕ್ತರೊಂದಿಗೆ ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ್, ಉಪನಿಬಂಧಕ ಅರವಿಂದ್ ಎನ್.ವಿ, ಮಿಲನ ವಿ.ಎನ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಎಂ.ಕರಣ್ಣನವರ, ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಎಸ್. ಕೌಲಂಪೂರೆ, ಹಿರಿಯ ಭೂ ವಿಜ್ಞಾನಿ ರಶ್ಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment