SUDDIKSHANA KANNADA NEWS/ DAVANAGERE/ DATE:28-02-2025
ದಾವಣಗೆರೆ: ಆಡಳಿತ ಉತ್ತಮವಾಗಿದ್ದರೆ ಒಳ್ಳೆ ಆಸ್ಪತ್ರೆ, ಜನರ ಒಳ್ಳೆ ಬದುಕು ನಿರ್ಮಾಣ, ಉತ್ತಮ ಶಿಕ್ಷಣ ನೀಡಲು ಸಾಧ್ಯ. ಹಾಗಾಗಿ ನೀವೆಲ್ಲ ವಿದ್ಯಾರ್ಥಿಗಳು ಕೇವಲ ನಿಮ್ಮ ಬದುಕನ್ನಷ್ಟೇ ರೂಪಿಸಿಕೊಳ್ಳದೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಡಳಿತಾತ್ಮಕವಾಗಿ ಸಮಾಜದಲ್ಲಿ ಆರೋಗ್ಯ ಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ನಿಮ್ಮ ಹೆಜ್ಜೆ ಇರಬೇಕು ಎಂದು ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.
ಅವರು ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಎಂಐಟಿ ಪೂರ್ವ-ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ದಿ ಹಿಂದೂ ಪತ್ರಿಕೆ ಗ್ರೂಪ್ ಮತ್ತು ಶಂಕರ್ ಐಎಎಸ್ ಅಕಾಡೆಮಿ ಬೆಂಗಳೂರಿನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಐಎಎಸ್ ಆಸ್ಪಿರಂಟ್ಸ್ ಕ್ಲಬ್ – ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ನಾವೆಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಸಂದರ್ಭದಲ್ಲಿ ಈ ರೀತಿಯಾದಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗೊಳಿಸುವಂತಹ ತರಬೇತಿ ಅವಕಾಶಗಳು ನಮಗಿರಲಿಲ್ಲ. ಹೀಗೆ ತರಬೇತಿಗಾಗಿ ಆಫ್ರಿಕಾ ಅಥವಾ ಡೆಲ್ಲಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಬದಲಾಗಿದ್ದು, ಕರ್ನಾಟಕದಲ್ಲೇ ಕನ್ನಡದ ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಬರೆಯಲಿ ಎಂಬ ಸದುದ್ದೇಶದಿಂದ ಉತ್ತೇಜನಕಾರಿಯಾಗಿ ಶಂಕರ್ ಅಕಾಡೆಮಿ ಸೇರಿದಂತೆ ಕರ್ನಾಟಕದಾದ್ಯಂತ ಇನ್ನಿತರ ಐಎಎಸ್ ಅಕಾಡೆಮಿಗಳು ತರಬೇತಿ ನೀಡಿ ತಯಾರಿಗೊಳಿಸುವ ಕೆಲಸ ಮಾಡುತ್ತಿವೆ. ನೀವು ಬಹಳ ಅದೃಷ್ಟವಂತರು ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಜ್ಞಾನಾರ್ಜನೆಗಾಗಿ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಹ ಹುಡುಕುವಂತ ಪರಿಸ್ಥಿತಿ ನಮಗಿತ್ತು. ಆದರೆ ಈಗ ಈ ಅಕಾಡೆಮಿಗಳು ಉಚಿತವಾಗಿ ತರಬೇತಿ ನೀಡಿ ತಯಾರಿಗೊಳಿಸುತ್ತಿರುವುದು ನಿಮಗೆಲ್ಲ
ಸದಾವಕಾಶವಾಗಿದೆ. ಬದುಕು ರೂಪಿಸಿಕೊಳ್ಳಲು ಮತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ಆಡಳಿತಾತ್ಮಕ, ಸ್ಪರ್ಧಾತ್ಮಕ ಪರೀಕ್ಷೆಗಳು ಆಹ್ವಾನಿಸುತ್ತಿವೆ. ಇದು ನಿಮಗೆಲ್ಲ ಅದೃಷ್ಟವಾಗಿದೆ ಎಂದು ತಿಳುವಳಿಕೆ ಮೂಡಿಸಿದರು.
ಉತ್ತಮ ಆಡಳಿತವಿದ್ದಾಗ ಜನರ ಬದುಕು ಉತ್ತಮವಾಗಿರಲು ಸಾಧ್ಯ ಎಂಬುದಾಗಿ ವೈದ್ಯರು, ಸಾಹಿತಿಗಳೂ ಆಗಿದ್ದ ನಮ್ಮ ತಂದೆ ಅವರ ಮಾತಾಗಿತ್ತು. ಒಬ್ಬ ಒಳ್ಳೆ ವೈದ್ಯ, ಒಳ್ಳೆ ವಿಜ್ಞಾನಿ, ಒಳ್ಳೆ ತಜ್ಞ ಹೇಗೆ ಮುಖ್ಯವೋ ಹಾಗೇ ಸ್ವಸ್ತ್ಯ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಉತ್ತಮ ಆಡಳಿತ ಬಹುಮುಖ್ಯ. ಜನರ ಬದುಕು ರೂಪಿಸಲು ಮತ್ತು ಅವರ ಕಷ್ಟ, ಸುಖಗಳ ಆಲಿಸಲು ಆಡಳಿತ ಪ್ರವೇಶ ಮಾಡಬೇಕು, ಅಲ್ಲಿನ ವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುವಂತೆ ನಮ್ಮ ತಂದೆಯವರು ನನಗೆ ಮಾರ್ಗದರ್ಶನ ಮಾಡುತ್ತಿದ್ದರು. ಹಾಗಾಗಿ ಪೊಲೀಸ್ ಇಲಾಖೆ ಸೇರಿ ಜನರ ಸೇವೆಗೆ ಮುಂದಾಗಿದ್ದೇನೆ ಎಂದು ವಿದ್ಯಾರ್ಥಿಗಳ ಎದುರು ತಮ್ಮ ಓದು ಮತ್ತು ಸರ್ಕಾರಿ ಸೇವೆಯ ದಿನಗಳ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ದಿ ಹಿಂದೂ ಗ್ರೂಪ್ ನ ಜನರಲ್ ಮ್ಯಾನೇಜರ್ ಶ್ರೀಧರ್ ಸಿ., ದಿ ಹಿಂದೂ ಹುಬ್ಬಳ್ಳಿ ಪ್ರದೇಶದ ಮುಖ್ಯ ಸಂಪಾದಕರಾದ ಗಿರೀಶ್, ಶಂಕರ್ ಐಎಎಸ್ ಅಕಾಡೆಮಿ ಪ್ರಾದೇಶಿಕ ಮುಖ್ಯಸ್ಥರಾದ ಪ್ರೇಮಾನಂದ, ದಿ ಹಿಂದೂ ಪತ್ರಿಕೆಯ ಆನಂದ್ ಮಾಳಗಿ, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಟಿ.ಆರ್. ತೇಜಸ್ವಿ ಕಟ್ಟಿಮನಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಓಂಕಾರಪ್ಪ ಸೇರಿದಂತೆ ಇತರರು ಇದ್ದರು.