SUDDIKSHANA KANNADA NEWS/ DAVANAGERE/ DATE:17-02-2024
ದಾವಣಗೆರೆ: ರಥ ಸಪ್ತಮಿಯಂದು ಸೂರ್ಯನನ್ನು ಪೂಜಿಸುವುದರಿಂದ ದೀರ್ಘಾಯುಷ್ಯ, ಸಂಪತ್ತು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಡಾ.ಎಸ್.ಅರ್.ಹೆಗಡೆ ತಿಳಿಸಿದರು.
ರಥ ಸಪ್ತಮಿಅಂಗವಾಗಿ ನಗರದ ಎಂಸಿಸಿಎ ಬ್ಲಾಕಿನ ಆಯುಷ್ ಯೋಗ ಕೇಂದ್ರದಲ್ಲಿ 108 ಸೂರ್ಯ ನಮಸ್ಕಾರ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಧಾರ್ಮಿಕ ನಂಬಿಕೆಗಳ ಪ್ರಕಾರ, ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಏಳನೇ ತಿಥಿಯಿಂದ ಭಗವಾನ್ ಸೂರ್ಯ ತನ್ನ ರಥವನ್ನು ಏರುತ್ತಾನೆ. ಸೂರ್ಯನು ಇಡೀ ಪ್ರಪಂಚವನ್ನು ಸುತ್ತುತ್ತಾನೆ. ಅಂದರೆ ಅವನು ಹನ್ನೆರಡು ರಾಶಿಗಳಲ್ಲಿ ಸಂಚರಿಸುತ್ತಾನೆ. ರಥ ಸಪ್ತಮಿಯನ್ನು ಸೂರ್ಯ ಜಯಂತಿ ಎಂದೂ ಕರೆಯುತ್ತಾರೆ. ರಥ ಸಪ್ತಮಿಯಂದು ಸೂರ್ಯನ ಜನ್ಮದಿನವನ್ನು ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ರಥ ಸಪ್ತಮಿಯಂದು 108 ನಮಸ್ಕಾರಗಳನ್ನು ಮಾಡಿ, 108 ಬಾರಿ ಸೂರ್ಯ ಮಂತ್ರ ಪಠಣ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಲಭಿಸುತ್ತವೆ. 12 ರಾಶಿಗಳ ನಾಮ ಜಪ ಮಾಡಿ, ನಮಸ್ಕಾರ ಮಾಡಿದರೆ ಸಕಲ ತೊಂದರೆ ನಿವಾರಣೆ ಆಗಲಿವೆ. ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ ರಾಶಿಗಳು. ಇವು ಕೇವಲ ರಾಶಿಗಳಲ್ಲ. ವರ್ಷದ ಹನ್ನೆರಡು ತಿಂಗಳುಗಳ ಸೂಚಕ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ್, ಡಾ.ಅನುರಾಧ, ಡಾ.ಶಿಲ್ಪ, ಯೋಗ ಪಟುಗಳಾದ ಗಿರೀಶ್, ಪೂಜಾ ರೂಪ, ಸುನೀಲ್, ನವ್ಯ ಇತರರು ಇದ್ದರು. ಯೋಗ ಶಿಕ್ಷಕರಾದ ಸಿದ್ಧಲಿಂಗ ಸ್ವಾಮಿ, ಪ್ರಭುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.