SUDDIKSHANA KANNADA NEWS/ DAVANAGERE/ DATE-03-06-2025
ದಾವಣಗೆರೆ: ದಾವಣಗೆರೆ ನಗರವನ್ನು ಸುಂದರವಾಗಿಸಲು ಸುತ್ತಲೂ ವರ್ತುಲ ರಸ್ತೆಗಳನ್ನು ನಿರ್ಮಿಸಲಾಗಿದ್ದು ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಆದಷ್ಟು ಶೀಘ್ರವಾಗಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 4 ರಿಂದ 5 ಎಕರೆ ಜಾಗವನ್ನು ಗುರುತಿಸಲು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಅವರು ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತ್ಯಾಧುನಿಕವಾಗಿ ನಗರದ ವಿನ್ಯಾಸವನ್ನು ನಿರ್ಮಾಣ ಮಾಡುವುದು ಮತ್ತು ಒಳಚರಂಡಿ, ನೀರಿನ ಸಂಪರ್ಕ, ರಸ್ತೆ ಸಂಪರ್ಕ, ವಾಯುವಿಹಾರಕ್ಕೆ ಉದ್ಯಾನವನಗಳ ನಿರ್ಮಾಣ ಸೇರಿದಂತೆ ನಗರವನ್ನು ಸ್ವಚ್ಚ ಮತ್ತು ಸುಂದರವಾಗಿ ನಿರ್ಮಾಣ ಮಾಡುವಲ್ಲಿ ಪ್ರಾಧಿಕಾರದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿನ್ಯಾಸಗಳನ್ನು ಪರಿಶೀಲನೆ ನಡೆಸಿ ಭವಿಷ್ಯದ ದೃಷ್ಟಿಯಿಂದ ನೂತನ ಬಡಾವಣೆಗಳಿಗೆ ಅನುಮೋದನೆ ನೀಡಬೇಕು ಎಂದರು.
ದಾವಣಗೆರೆಯಲ್ಲಿ ಟ್ರಕ್ ಟರ್ಮಿನಲ್‍ನ ಕೊರತೆ ಇದ್ದು ಅನೇಕ ದಿನಗಳ ಬೇಡಿಕೆ ಇದಾಗಿದೆ. ನಗರಾಭಿವೃದ್ದಿ ಪ್ರಾಧಿಕಾರದಿಂದಲೇ ಇದಕ್ಕೆ ಬೇಕಾದ ಕನಿಷ್ಠ 4-5 ಎಕರೆ ಜಾಗವನ್ನು ಗುರುತಿಸಬೇಕೆಂದರು.
ಜೂನ್ 16 ಕ್ಕೆ ಸಿಎಂ:
ಮುಖ್ಯಮಂತ್ರಿಯವರು ಜೂನ್ 16 ರಂದು ದಾವಣಗೆರೆಗೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಈ ಬಗ್ಗೆ ವಿವರವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಹಿರಿಯರು ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ 95 ನೇ ಜನ್ಮ ದಿನಾಚರಣೆ ಅಂಗವಾಗಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸುತ್ತಿದ್ದು ಇನ್ನು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ
ಎಂದರು.
ಸಭೆಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಾಶಾಂತ್, ಪ್ರಾಧಿಕಾರದ ಸದಸ್ಯರಾದ ವಾಣಿ ಎಂ.ಆರ್, ಎಂ.ಮಂಜುನಾಥ್, ಗಿರೀಶ್ ಹೆಚ್ ಹಾಗೂ ಇನ್ನಿತರೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.