SUDDIKSHANA KANNADA NEWS/ DAVANAGERE/ DATE:05-01-2025
ದಾವಣಗೆರೆ: ನಾನು ಎಲ್ಲಾ ಜಾತಿಯವರನ್ನೂ ಪ್ರೀತಿಸುತ್ತೇನೆ. ಆದರೆ ಜಾತಿ ಮಾಡುವವರನ್ನು ನಾನು ವಿರೋಧಿಸುತ್ತೇನೆ. ಯಾವ ಜಾತಿಯವರನ್ನೂ ದ್ವೇಷಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಕುತೂಹಲ ಮೂಡಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ 537 ನೇ ಕನಕ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಜಾತಿ ಕಾರಣದಿಂದ ಕನಕದಾಸರನ್ನು ಉಡುಪಿ ಮಠದ ಒಳಗೆ ಬಿಡಲಿಲ್ಲ ಎನ್ನುತ್ತಾ ಕನಕನ ಕಿಂಡಿ ಸೃಷ್ಟಿಯಾದ ಪ್ರಸಂಗವನ್ನು ವಿವರಿಸಿದರು.
ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಸಂತ. ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿ ದಾಸ ಶ್ರೇಷ್ಠರಾದರು ಎಂದು ತಿಳಿಸಿದರು.
ಶರಣ ಸಾಹಿತ್ಯದಲ್ಲಿ ಅಣ್ಣ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ದನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕೆ ಅವಮಾನಿತರಾಗಿದ್ದರು. ಯಾರೂ ಜನ್ಮತಃ ದಡ್ಡರಾಗಿರಲು ಸಾಧ್ಯವಿಲ್ಲ. ಕಾಳಿದಾಸರು ಶಾಕುಂತಲಾ ಬರೆದದ್ದು, ವ್ಯಾಸರು ಮಹಾಭಾರತ ಬರೆದದ್ದು, ವಾಲ್ಮೀಕಿ ರಾಮಾಯಣ ಬರೆದದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದರು.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಕಾರಣದಿಂದ ನನಗೆ ಮುಖ್ಯಮಂತ್ರಿ ಅಗುವ ಅವಕಾಶ ಸಿಕ್ಕಿತು. ಒಬ್ಬರಿಗೆ ಒಂದೇ ಮತ. ಎಲ್ಲಾ ಜಾತಿ, ಧರ್ಮ, ಅಂತಸ್ತಿವರಿಗೂ ಒಂದೇ ಮತ. ಈ ಸಮಾನತೆ ಆರ್ಥಿಕವಾಗಿ, ಸಾಮಾಜಿಕವಾಗಿಯೂ ಜಾರಿ ಆಗಬೇಕು. ಆಗ ಮಾತ್ರ ಸಮಾನತೆ ದಿಕ್ಕಿನಲ್ಲಿ ನಾವು ಮುನ್ನಡೆಯಲು ಸಾಧ್ಯ ಎಂದು ತಿಳಿಸಿದರು.
ಯಾವ ಧರ್ಮದಲ್ಲೂ ಮನುಷ್ಯ ತಾರತಮ್ಯ ಇಲ್ಕ. ಧರ್ಮವನ್ನು ರಾಜಕೀಯವಾಗಿ ಬಳಸಿಕೊಳ್ಳುವವರು ತಮ್ಮ ಲಾಭಕ್ಕಾಗಿ ತಾರತಮ್ಯ, ದ್ವೇಷ ಸೃಷ್ಟಿಸುತ್ತಾರೆ ಎಂದು ಹೇಳಿದರು.
ಶೋಷಿತ ಸಮುದಾಯಗಳು ಜಾತಿ ಸಮ್ಮೇಳನ ಮಾಡುವುದು ತಪ್ಪಲ್ಲ. ಆದರೆ ಮುಂದುವರೆದ ಜಾತಿಗಳು ಜಾತಿ ಹೆಸರಲ್ಲಿ ಸಮ್ಮೇಳನ ನಡೆಸುವುದು ಸಾಮಾಜಕವಾಗಿ ತಪ್ಪಾಗುತ್ತದೆ. ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಶಕ್ತಿ ಬರುವುದಿಲ್ಲ ಎಂದು ಹೇಳಿದರಲ್ಲದೇ, ಮನುಷ್ಯ ಧರ್ಮ ಸ್ಥಾಪನೆ ಆಗುವವರೆಗೂ ನಾವೆಲ್ಲರೂ ಶ್ರಮಿಸುತ್ತಲೇ ಇರಬೇಕು ಎಂದರು.
ಕನಕದಾಸರ 500 ನೇ ಜಯಂತಿಯನ್ನು ನಾನು ಸಾರಿಗೆ ಸಚಿವನಾಗಿದ್ದಾಗ ಆಗಿನ ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ಆರಂಭಿಸಿದೆವು. ಬಳಿಕ ಇಡೀ ರಾಜ್ಯ ಪ್ರವಾಸ ಮಾಡಿ ಕಾಗಿನೆಲೆ ಗುರುಪೀಠ, ಮಠವನ್ನು ರೂಪಿಸಿದ್ದು ಕೂಡ ನಾನೇ.
ಆದ್ದರಿಂದ ಇಡೀ ಸಮುದಾಯ ಒಟ್ಟಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.