SUDDIKSHANA KANNADA NEWS/ DAVANAGERE/ DATE:06-01-2024
ದಾವಣಗೆರೆ: ವಿದ್ಯಾರ್ಥಿಗಳು ಗೊತ್ತಿಲ್ಲದಿರುವುದನ್ನು ಪ್ರಶ್ನಿಸಿ ಉತ್ತರ ಪಡೆಯುವುದನ್ನು ಕಲಿತುಕೊಳ್ಳಬೇಕು, ನಾನು ಸಹ ಪ್ರಶ್ನಿಸಿಯೇ ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ನಾಡಿನ ಹಿರಿಯ ಸಾಂಸ್ಕೃತಿಕ ಸಂಘಟಕ ಹಾಗೂ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದರು.
ಗೋಣಿವಾಡದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯ ಹಾಗೂ ಶ್ರೀ ಸೋಮೇಶ್ವರ ಸರ್ ಎಂವಿ ಎಲೈಟ್ ಓಲಂಪಿಯಾಡ್ ಸ್ಕೂಲ್‌ನಲ್ಲಿ ನಡೆದ ಸೋಮೇಶ್ವರೋತ್ಸವ-2024 ಸಮಾರಂಭ ಉದ್ಘಾಟಿಸಿ ಅವರು
ಮಾತನಾಡಿದರು.
ಡಾ.ರಾಜ್‌ಕುಮಾರ್ ಅವರಿಂದ ಕಂಠೀರವ ಸ್ಟುಡಿಯೋದಲ್ಲಿ ಹಾಡನ್ನು ಹೇಳಿಸಿದ ಕೀರ್ತಿ ನನಗಿದೆ. 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ನಾನು ಮತ್ತು ಚಿತ್ರನಟ ದಿ.
ಶಂಕರ್ ನಾಗ್ ಜೊತೆಯಾಗಿ ಕಾರ್ಯನಿರ್ವಹಿಸಿ ಸಮ್ಮೇಳನ ಯಶಸ್ವಿಗೊಳಿಸಿದ ಹೆಮ್ಮೆ ಇನ್ನೂ ಹಸಿರಾಗಿದೆ. 70 ಜನ ದಲಿತ ಕಲಾವಿದರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ, 3 ದಲಿತ ಕವಿಗಳಿಗೆ ಪದ್ಮಶ್ರೀ ಪ್ರಶಸ್ತಿ
ಸಿಗಲು ಶ್ರಮಿಸಿದ ಧನ್ಯತಾ ಭಾವವೂ ನನಗಿಂದು ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಿಂದ ದೊರಕಿದೆ. ಹಂಪಿ ಉತ್ಸವ ಮಾಡುವ ಸಂದರ್ಭದಲ್ಲಿ ಅನೇಕ ಅಡೆತಡೆಗಳನ್ನು ಒಡ್ಡಲಾಯಿತು. ಮೇದಾರ ಜನಾಂಗದ ವ್ಯಕ್ತಿಗಳಿಂದ ಉತ್ಸವಕ್ಕೆ ಹಾಕಿಸಿದ್ದ ಚಪ್ಪರವನ್ನೂ ಕಿತ್ತು ಹಾಕಿಸಿದರು. ಆದರೂ ಛಲ ಬಿಡದೇ ಬೆಟ್ಟ ಗುಡ್ಡಗಳಿಗೆ ವಿದ್ಯುತ್ ಬೆಳಕನ್ನು ಹಾಕಿಸಿ ಹಂಪಿ ಉತ್ಸವವನ್ನು ನೆರೆವೇರಿಸಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಬದುಕಿನ ಕೆಲ ಘಟನೆಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ತಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಛಲದಿಂದ, ಬದ್ಧತೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಕಣ್ವಕುಪ್ಪೆ ಮಠದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂದು ಭಾರತ ದೇಶವು ಅನೇಕ ವಿಷಯಗಳಲ್ಲಿ ವಿಶ್ವಕ್ಕೆ ಗುರುವಾಗಿ ಬೆಳೆದಿದೆ. ಇಲ್ಲಿನ ಸಾಂಸ್ಕೃತಿಕ ಮತ್ತು ಸಂಸ್ಕೃತಿಯ ಪರಂಪರೆಯನ್ನು ಅನುಗ್ರಹಿಸಿದ ಕೀರ್ತಿ ನಾಡಿನ ಹಿರಿಯ ಶರಣರಿಗೆ, ತಪಸ್ವಿಗಳಿಗೆ ಸಲ್ಲುತ್ತದೆ. ನಾವು ಶ್ರೇಷ್ಠತೆಯ ಹಾಗೂ ಪುಣ್ಯದ ಕೆಲಸಗಳ ಫಲವಾಗಿ ಮನುಷ್ಯರಾಗಿ ಜನಿಸಿದ್ದೇವೆ. ಹಾಗಾಗಿ ಪುಣ್ಯ ಕೆಲಸಗಳನ್ನು ಮಾಡುತ್ತ ಜೀವನ ಸಾಗಿಸಬೇಕು. ಆಗ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಬಗೆಹರಿಸಲು ಭಗವಂತನ ಕಾರುಣ್ಯ ಇರುತ್ತದೆ ಎಂದು ಆಶೀರ್ವಚನ ನೀಡಿದರು.
ದಾವಣಗೆರೆಯ ವಾಲ್ಮೀಕಿ ನಾಯಕ ವಿದ್ಯಾರ್ಥಿನಿಲಯದ ಅಧ್ಯಕ್ಷ ಬಿ. ವೀರಣ್ಣ ಹಾಗೂ ಅವರ ಪತ್ನಿ ಲಕ್ಷ್ಮೀದೇವಿ ಮತ್ತು 25 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಕ್ಕವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರ ಸಂಘಕ್ಕೆ ಶ್ರೀ ಸೋಮೇಶ್ವರ ವಿದ್ಯಾಲಯದ ವತಿಯಿಂದ ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ “ಸೋಮೇಶ್ವರ ಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀ ಆಂಜನೇಯ ಸೌಹಾರ್ದ ಸಹಕಾರ ಸಂಘದ ಪರವಾಗಿ ಅಧ್ಯಕ್ಷ ರುದ್ರೇಗೌಡರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಮಾರಂಭದ ವೇದಿಕೆಯಲ್ಲಿ ನಿವೃತ್ತ ಸೈನ್ಯಾಧಿಕಾರಿ ಡಾ. ಹಾಲೇಶ್, ಸಾಹಿತಿ ಬಾ.ಮ. ಬಸವರಾಜಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೊಟ್ರೇಶ್, ಸರ್‌ಎಂವಿ ಕಾಲೇಜಿನ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಶ್ರೀ ಸೋಮೇಶ್ವರ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್, ಅಧ್ಯಕ್ಷ ಹೆಚ್.ಆರ್.ಅಶೋಕ್ ರೆಡ್ಡಿ, ಪ್ರಾಚಾರ್ಯೆ ವೀಣಾ ಸುರೇಶ್ ಇದ್ದರು. ಸಮಾರಂಭದಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯದ ಹರೀಶ್ ಬಾಬು, ಪ್ರಭಾವತಿ, ಮಾಲ, ಹೇಮ, ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ತರುವಾಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.