SUDDIKSHANA KANNADA NEWS/ DAVANAGERE/ DATE:03-03-2025
ದಾವಣಗೆರೆ: ಅನಾಥ ಮಕ್ಕಳನ್ನು ದತ್ತು ಪಡೆಯುವುದು ಹೇಗೆ? ಯಾವೆಲ್ಲಾ ನಿಬಂಧನೆಗಳು ಇರುತ್ತವೆ. ಏನೆಲ್ಲಾ ಮಾಡಬೇಕೆಂಬ ಗೊಂದಲ ಮಕ್ಕಳಾಗದ ದಂಪತಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.
ಅನಾಥ ಮಗು ಸಿಕ್ಕಾಗ?
– ಯಾವುದೇ ಮಗು ಕೇಂದ್ರಕ್ಕೆ ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲು ಮಾಡಲಾಗುತ್ತದೆ.
– ಮಗು ಕುರಿತು ಪತ್ರಿಕೆಗಳಿಗೆ ಮಾಹಿತಿ ನೀಡಲಾಗುತ್ತದೆ.
– ಆನಂತರ ವಾರಸುದಾರರಿಗಾಗಿ ಎರಡು ತಿಂಗಳು ಕಾಯಲಾಗುತ್ತದೆ
– ಯಾರೂ ಬರದಿದ್ದರೆ ಮಕ್ಕಳ ಸಂರಕ್ಷಣಾ ಸಮಿತಿಯಿಂದ ಈ ಮಗು ಅನಾಥ ಎಂದು ಅನುಮತಿ ಪಡೆದು ದತ್ತು ಸ್ವೀಕಾರ ಕೇಂದ್ರಕ್ಕೆ ಪಡೆಯಲಾಗುತ್ತದೆ.
ದತ್ತು ವಿಧಾನ:
– ಮಗುವಿನ ವಿವರ ಆನ್ಲೈನ್ಗೆ ಹಾಕಲಾಗುತ್ತದೆ.
– ಆನ್ಲೈನ್ನಲ್ಲಿಯೇ ದತ್ತು ಪಡೆಯ ಬಯಸುವ ಪೋಷಕರು ಕೂಡ ತಮ್ಮ ಮಾಹಿತಿ ನಮೂದಿಸುತ್ತಾರೆ.
– ಅನಂತರ ಪೋಷಕರ ಹಿನ್ನೆಲೆ, ಉದ್ದೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.
– ಎಲ್ಲವೂ ಸರಿಯೆಂದು ಕಂಡು ಬಂದಲ್ಲಿ ಸಾಕುವ ಪೋಷಕರಿಗೆ ಮಗುವನ್ನು ದತ್ತು ನೀಡಲಾಗುತ್ತದೆ.
– ಆದರೆ ಒಂದು ಮಗು ದತ್ತು ಪಡೆಯಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ.
– ಹೀಗೆ ಸ್ವೀಕರಿಸಿದ ನಂತರ ಎರಡು ವರ್ಷದವರೆಗೂ ದತ್ತು ಕೇಂದ್ರ ಮಗುವಿನ ಪೋಷಣೆ ಕುರಿತು ಕಾಲ ಕಾಲಕ್ಕೆ ವರದಿ ಸಂಗ್ರಹಿಸುತ್ತದೆ.
ದಾವಣಗೆರೆಯಲ್ಲಿ 2012 ರಿಂದ ದತ್ತು ಸ್ವೀಕಾರ ಕೇಂದ್ರ ಆರಂಭವಾಗಿದ್ದು, ಇಲ್ಲಿಯವರೆಗೆ ಸುಮಾರು 212 ಮಕ್ಕಳನ್ನು ದಾಖಲಿಸಿಕೊಂಡಿದ್ದಾರೆ. ಈವರೆಗೆ 73 ಮಕ್ಕಳನ್ನು ದತ್ತು ನೀಡಲಾಗಿದೆ. ಅದರಲ್ಲಿ 64 ಮಕ್ಕಳ ಸ್ವದೇಶಿ ದಂಪತಿ, 9 ಮಕ್ಕಳು ವಿದೇಶದ ದಂಪತಿ ದತ್ತು ಸ್ವಿಕರಿಸಿದ್ದಾರೆ.
ಕೇಂದ್ರದಲ್ಲಿ 10 ಮಕ್ಕಳನ್ನು ಪೋಷಿಸಲು ಮಾತ್ರ ಅವಕಾಶವಿದೆ. ಆದರೆ ಈಗ 27 ಮಕ್ಕಳು ದಾಖಲಾಗಿವೆ. ಇಂದು ಸುಮಾರು 2 ತಿಂಗಳಿಂದ 3 ತಿಂಗಳ 5 ಮಗುವಿಗೆ ನಾಮಕರಣ ಮಾಡಲಾಯಿತು. ವಾತ್ಸಲ್ಯಾ ಸದನಕ್ಕಾಗಿ ಸ್ಥಳದ ಕುರಿತು ಚರ್ಚೆಯನ್ನು ಕೂಡ ಮಾಡಲಾಯಿತು.
ಕೇಂದ್ರದಲ್ಲಿನ ಸೌಲಭ್ಯಗಳು:
ನವಜಾತ ಶಿಶುಗಳನ್ನು ಎಷ್ಟೇ ನಿಗಾವಹಿಸಿ ಪೋಷಣೆ ಮಾಡಿದರೂ ಅನಾರೋಗ್ಯದಿಂದು ಶಿಶುಗಳು ಬಳಲುತ್ತವೆ. ಈ ದತ್ತು ಕೇಂದ್ರದಲ್ಲಿ ಅಷ್ಟೆ ಸುರಕ್ಷಿತವಾಗಿ ಪೋಷಿಸಲಾಗುತ್ತದೆ. ಸೊಳ್ಳೆಗಳ ತಡೆಗೆ ಮೆಸ್, ಹೊಸ ತೊಟ್ಟಿಲು, ಮಕ್ಕಳ ಬಟ್ಟೆ ತೊಳೆಯಲು ವಾಷಿಂಗ್ ಮೆಶಿನ್ಗಳಿವೆ. ಆಯಾಗಳು ಮಕ್ಕಳನ್ನು ಹೇಗೆ ಪೋಷಿಸುತ್ತಾರೆ ಎಂದು ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಿದೆ.
ಇಲ್ಲಿ ಎಂಟು ಜನ ಆಯಾಗಳು, ಇಬ್ಬರು ಸಾಮಾಜಿಕ ಕಾರ್ಯಕರ್ತ, ಇಬ್ಬರು ಸಂಯೋಜಕರು, ಒಬ್ಬ ನರ್ಸ್ ಸೇರಿ ಹದಿಮೂರು ಸಿಬ್ಬಂದಿ ದತ್ತು ಸ್ವೀಕಾರ ಕೇಂದ್ರದಲ್ಲಿದ್ದಾರೆ. ಆಯಾಗಳು ನಾಲ್ಕು ತಾಸಿಗೆ ಒಬ್ಬರಂತೆ ಮೂರು ಪಾಳಿಯಲ್ಲಿ ತಾಯಿಯಂತೆ ಕೆಲಸ ಮಾಡುವರು.