SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: ವಿಪರೀತ ಮದ್ಯಪಾನ ಮಾಡುವವರನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ತಾಣಕ್ಕೆ ಬಂದರೆ ಸಾಕು ಕುಡಿತ ಬಿಟ್ಟುಬಿಡುತ್ತಾರೆ. ಬಿಡದಿದ್ರೆ ಆ ದೇವರು ಬಿಡುವುದಿಲ್ಲ. ಒಮ್ಮೆ ಕುಡಿತ ಬಿಡುತ್ತೇನೆಂದು ಈ ದೇವರ ಸನ್ನಿಧಾನದಲ್ಲಿ ಪ್ರಮಾಣ ಮಾಡಿದರೆ ಮುಗೀತು. ಮತ್ತೆ ಉಲ್ಲಂಘನೆ ಮಾಡಿದರೆ ಆ ದೇವರು ಶಿಕ್ಷೆ ಕೊಡುವುದು ಗ್ಯಾರಂಟಿ. ಲಕ್ಷಾಂತರ ಮಂದಿ ಈ ತಾಣಕ್ಕೆ ಬಂದು ಕುಡಿತ ಬಿಟ್ಟಿದ್ದಾರೆ. ಅಷ್ಟೊಂದು ಶಕ್ತಿಶಾಲಿ ದೇವಸ್ಥಾನ ಇದು.
ಈ ದೇವಸ್ಥಾನ ಇರುವುದು ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ. ಎಷ್ಟು ಕಷ್ಟಪಟ್ಟರೂ ಮದ್ಯ ಚಟ ಬಿಡಿಸಲು ಆಗುವುದಿಲ್ಲ ಎಂಬ ಕೊರಗು ಇದ್ದ ಅದೆಷ್ಟೋ ಮಂದಿ ಇಲ್ಲಿಗೆ ಬಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಕಂಡುಕೊಳ್ಳುತ್ತಲೇ ಇದ್ದಾರೆ. ಕೈದಾಳೆಯಲ್ಲಿ ನೆಲೆಸಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕುಡುಕರಿಗೆ ದೀಕ್ಷೆ ನೀಡುವ ಮೂಲಕ ಈ ಚಟದಿಂದ ಮುಕ್ತರನ್ನಾಗಿ ಮಾಡಲಾಗುತ್ತದೆ.
ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಆಚರಣೆ. ಇಲ್ಲಿ ಕುಡುಕರಿಗೆ ದೀಕ್ಷೆ ನೀಡುವುದೇ ಇಲ್ಲಿನ ವಿಶೇಷ. ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಮದ್ಯಪಾನಿಗಳನ್ನು ಕರೆ ತಂದು ಮಾಲೆ ತೊಡಿಸಿ ದೀಕ್ಷೆ
ನೀಡಲಾಗುತ್ತದೆ. ದೇಗುಲದ ಗಂಟೆ ಬಾರಿಸಿ ಪ್ರಮಾಣ ಮಾಡಿಸಲಾಗುತ್ತದೆ. ಬಳಿಕ ಕುಡಿತದ ಚಟ ಬಿಡುತ್ತಾರೆ ಎಂಬ ನಂಬಿಕೆ ಈಗಲೂ ಇದೆ. ಹಾಗಾಗಿ ಇಲ್ಲಿ ಜನಸ್ತೋಮವೇ ನೆರೆದಿರುತ್ತದೆ.
ಸ್ವಾಮಿ ರಥೋತ್ಸವದಲ್ಲಿ ಏನು ನಡೆಯುತ್ತೆ…?
ಜನ ಸಾಗರದ ಮಧ್ಯೆ ಕೈದಾಳೆ ಗ್ರಾಮದಲ್ಲಿ ಅದ್ಧೂರಿಯಾಗಿ ಶ್ರೀ ಮಲ್ಲಿಕಾರ್ಜುನ ದೇವರ ರಥೋತ್ಸವ ನಡೆಯುತ್ತದೆ. ಮದ್ಯಪಾನದ ದಾಸರಾಗಿ ಅದನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎನ್ನುವವರು ಇಲ್ಲಿಗೆ ಬಂದು ಹೋದ ಮೇಲೆ ಕುಡಿತ ಬಿಟ್ಟಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಇದಕ್ಕೆ ಸ್ವಾಮಿ ಸನ್ನಿಧಿಯಲ್ಲಿ ನಡೆಯುವ ಪವಾಡ ಎಂಬುದು ಭಕ್ತರ ನಂಬಿಕೆ.
ಚಟ ಬಿಡಿಸುವುದಾದರೂ ಹೇಗೆ…?
ದೇವಸ್ಥಾನದ ಪೂಜಾರಿಗಳು ಇಲ್ಲಿ ಪೂಜೆ ಮಾಡಿ ಇವರಿಗೆ ಮಲ್ಲಿಕಾರ್ಜುನ ಸ್ವಾಮಿಯ ಮಾಲೆ ಹಾಕುತ್ತಾರೆ. ಈ ವೇಳೆ ಕುಡುಕರು ಸಾಲಾಗಿ ಕುಳಿತಿರುತ್ತಾರೆ. ಸಾಲಿನಲ್ಲಿ ಕುಳಿತವರಿಗೆ ಬಾಳೆ ಹಣ್ಣು ನೀಡಲಾಗುತ್ತದೆ. ಇವರಿಗೆ ಕುಡಿತದ ಚಟ ಬಿಡಿಸುವ ಸಲುವಾಗಿ ಈ ಕಾರ್ಯ ಮಾಡಿಸಲಾಗುತ್ತಿದೆ ಅಂತಾ ಗೊತ್ತಿರುವುದಿಲ್ಲ ಎಂಬುದು ಇಲ್ಲಿನ ಮತ್ತೊಂದು ವಿಶೇಷ.
ಮುದ್ರೆ ಹಾಕುವುದು ಕೈ ಬಿಟ್ಟಿದ್ಯಾಕೆ..?
ಈ ಹಿಂದೆ ಪೂಜಾರಿ ತ್ರಿಶೂಲ ಕಾಯಿಸಿ ಕೆಂಪಾದ ಮೇಲೆ ಕುಡುಕರ ನಾಲಿಗೆಗೆ ಮುದ್ರೆ ಹಾಕುವ ಸಂಪ್ರದಾಯ ಇತ್ತು. ಬಳಿಕ ಮದ್ಯ ಸೇವನೆ ತ್ಯಜಿಸುತ್ತಿದ್ದರು ಎಂಬ ಬಲವಾದ ನಂಬಿಕೆ ಬೇರೂರಿತ್ತು. ಬದಲಾದ ಕಾಲಘಟ್ಟದಲ್ಲಿ ಇದಕ್ಕೆ ಇತಿಶ್ರೀ ಹಾಡಲಾಗಿದೆ. ದೇವಾಲಯದ ಗಂಟೆ ಹಿಡಿದು ಮಾಲೆ ತೊಡಿಸಿ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಿಸಲಾಗುತ್ತದೆ. ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಅಂತಾ ಹೇಳಿಸಲಾಗುತ್ತದೆ. ಆ ಬಳಿಕ ಇಲ್ಲಿಂದ ಹೋದವರು ಕುಡಿತ ಬಿಟ್ಟಿದ್ದಾರೆ ಎನ್ನುತ್ತಾರೆ ದೇಗುಲದ ಪೂಜಾರಿಗಳು.
ರಥೋತ್ಸವದ ದಿನ ಇಲ್ಲಿ ನೂರಾರು ಕುಡುಕರಿರುತ್ತಾರೆ. ಕೆಲವರು ಕುಡಿತ ಬಿಡಬೇಕು ಎಂದುಕೊಂಡು ಬಂದರೆ, ಮತ್ತೆ ಕೆಲವರು ಕುಟುಂಬದ ಸದಸ್ಯರ ಒತ್ತಾಯಕ್ಕೆ ಮಣಿದು ಬಂದಿರುತ್ತಾರೆ. ಕೆಲವೊಮ್ಮೆ ದೀಕ್ಷೆ ಕೊಡುವಾಗ ಕುಡುಕರು ಓಡಿ ಹೋದ ಪ್ರಸಂಗವೂ ನಡೆದಿವೆಯಂತೆ.
ಈ ಹಿನ್ನೆಲೆಯಲ್ಲಿ ಎಷ್ಟೋ ಮಹಿಳೆಯರು ತನ್ನ ಗಂಡನಿಗೆ ಗೊತ್ತಾಗದ ಹಾಗೆ ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಅಂದ ಹಾಗೆ ಈ ಸ್ವಾಮಿಗೆ ಹೆಚ್ಚಾಗಿ ಮಹಿಳಾ ಭಕ್ತರಿದ್ದಾರೆ. ತನ್ನ ಗಂಡನ ವಿಪರೀತ ಕುಡಿತ ಚಟದಿಂದ ಬೇಸತ್ತು ಇಲ್ಲಿಗೆ ಕರೆದುಕೊಂಡು ಬಂದ ಬಳಿಕ ಒಳಿತು ಕಂಡಿರುವ ಹಾಗೂ ತನ್ನ ಗಂಡನಿಗೆ ದೀಕ್ಷೆ ಕೊಡಿಸಿರುವ ಮಹಿಳೆ ಮಾತು.
ಬೇರೆ ಬೇರೆ ರಾಜ್ಯದವರೂ ಇಲ್ಲಿಗೆ ಬಂದು ಹೋದ ಮೇಲೆ ಕುಡಿತದ ಚಟದಿಂದ ಮುಕ್ತರಾಗಿದ್ದಾರೆ. ಈಗ ಜೀವನದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರಂತೆ. ಕೆಲವರು ಶ್ರೀಶೈಲಕ್ಕೆ ಹೋಗಲಾಗದ ಮಹಿಳೆಯರು ಇಲ್ಲಿಗೆ ಬಂದು ಸ್ವಾಮಿಯ ದರ್ಶನ ಪಡೆಯುತ್ತಾರೆ. ಅಲ್ಲಿಗೆ ಹೋಗಿ ಬರಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವವರು ಇಲ್ಲಿಗೆ ಬಂದರೆ ಅಲ್ಲಿಗೆ ಹೋಗಿ ಬಂದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯನ್ನೂ ಹೊಂದಿದ್ದಾರೆ.
ಯಾವಾಗ ನಡೆಯುತ್ತೆ ಜಾತ್ರೆ:
ಮಾ.14ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀ ಮಲ್ಲಿಕಾರ್ಜುನ ಟ್ರಸ್ಟ್ ಮಂಡಳಿ, ಕೈದಾಳೆ ವತಿಯಿಂದ ಮಾ. 14ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾ ರಥೋತ್ಸವ ಜರುಗಲಿದೆ.
ಮಾ.12 ರಂದು ಸಂಜೆ 6-30 ರಿಂದ ರೇವತಿ ನಕ್ಷತ್ರದಲ್ಲಿ ಗೋಧೂಳಿ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ. ಮಾ. 13 ರಂದು ಬೆಳಿಗ್ಗೆ 7-30 ರಿಂದ ಅಶ್ವಿನಿ ನಕ್ಷತ್ರದಲ್ಲಿ ಗಜ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ, ಬೆಳಿಗ್ಗೆ 10:30 ಕ್ಕೆ ರಥದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ, ಬೆಳಿಗ್ಗೆ 11ಕ್ಕೆ ಶ್ರೀ ಸ್ವಾಮಿಯ ರಥಕ್ಕೆ ಅರಿಶಿಣ ಎಣ್ಣೆ ಧಾರಣೆ ಜರುಗಲಿದೆ.
ಮಾ.14 ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾರಥೋತ್ಸವ ಜರುಗಲಿದ್ದು, ಜಾನಪದ ಕಲಾವಿದರಾದ ಪುರವಂತರ ನೃತ್ಯ, ಸಮಾಳಗಳ ಸಪ್ಪಳ, ಒಡಪುಗಳ ಸದ್ದಿನಲ್ಲಿ ವಾದ್ಯಗಳ ಝೇಂಕಾರ ಹಾಗೂ ಡೊಳ್ಳು ಕುಣಿತದೊಂದಿಗೆ ಬನ್ನಿ ಮಂಟಪ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ನಂತರ ಶ್ರೀಸ್ವಾಮಿಯು ಮರಡಿ ತಿಮ್ಮಪ್ಪ ಸ್ವಾಮಿಯ ಬೆಟ್ಟದಲ್ಲಿ ಪೂಜಾ ದರ್ಶನ ಇರುತ್ತದೆ.
ಅಂದು ಮಧ್ಯಾಹ್ನ 1 ರಿಂದ ಸಂಜೆ 5 ರ ವರೆಗೆ ಜವಳ ಕಾರ್ಯಕ್ರಮ ಅಂದು ಮಧ್ಯಾಹ್ನ 3 ರಿಂದ ಸಂಜೆ 6-30 ರ ವರೆಗೆ ಜೋಡಿ ಬಸವಗಳ ಹಾಗೂ ಗ್ರಾಮದ ಟ್ರ್ಯಾಕ್ಟರ್ ಗಳ ಮೂಲಕ ಮೆರವಣಿಗೆಯೊಂದಿಗೆ ಪಾನಕ ವಿತರಣೆ ಸಂಜೆ 5 ರಿಂದ ಸಂಜೆ 6-30 ರ ವರೆಗೆ ಅಗ್ನಿಕುಂಡ ಪೂಜೆ ಮತ್ತು ಓಕಳಿ ಹಾಗೂ ರಾತ್ರಿ 9-30 ರಿಂದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ವೀರಗಾಸೆ, ಪುರವಂತರ ಒಡಪು ಗೀತೆಗಳೊಂದಿಗೆ ಮುಂಜಾನೆ 2-30 ಗಂಟೆಗೆ ಬ್ರಾಹ್ಮ ಮುಹೂರ್ತದಲ್ಲಿ ಶ್ರೀಸ್ವಾಮಿಯು ನಡೆ ಮಡಿಯೊಂದಿಗೆ ಅಗ್ನಿಕುಂಡ ಪ್ರವೇಶ ಇರುತ್ತದೆ. ಮಾ.15 ರಂದು ಸಂಜೆ 5 ಗಂಟೆಗೆ ದಿಬ್ಬಣ ಕಾರ್ಯಕ್ರಮವಿರುತ್ತದೆ.
ರಥೋತ್ಸವದ ದಿನ ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಸಾಲು ಸಾಲಾಗಿ ಕುಳಿತ ಕುಡುಕರಿಗೆ ಪೂಜಾರಿ ದೀಕ್ಷೆ ನೀಡುತ್ತಾರೆ. ಅಂದ ಹಾಗೆ ದಿನಕ್ಕೆ ನಾಲ್ಕು ಮತ್ತು ಅದಕ್ಕಿಂತ
ಹೆಚ್ಚು ಕ್ವಾರ್ಟರ್ ಸೇವಿಸುವವರನ್ನು ಕರೆದುಕೊಂಡು ಬರಲಾಗಿರುತ್ತದೆ. ಹಾಸನ, ಮಂಡ್ಯ, ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ನೂರಾರು ಮದ್ಯವ್ಯಸನಿಗಳನ್ನು ಇಲ್ಲಿಗೆ ಅವ್ರ ಸಂಬಂಧಿಕರು ಕರೆದುಕೊಂಡು ಬರುತ್ತಾರೆ. ಮತ್ತೆ ಸಾರಾಯಿ ಅಂಗಡಿಗಳತ್ತ ಸುಳಿಯಬಾರದು ಎಂಬ ಕಾರಣಕ್ಕೆ ಇಲ್ಲಿ ದೀಕ್ಷೆ ಕೊಡಿಸುವ ಕೆಲಸ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ಒಟ್ಟಿನಲ್ಲಿ ನಂಬಿಕೆಯೋ ಅಥವಾ ಮೂಢ ನಂಬಿಕೆಯೋ ಗೊತ್ತಿಲ್ಲ. ಆದರೆ, ಕೈದಾಳೆ ಮಲ್ಲಿಕರ್ಜುನ ಸ್ವಾಮಿ ಸನ್ನಿಧಿಗೆ ಬಂದು ಸಾರಾಯಿ ಕುಡಿತದಿಂದ ಹಲವು ಮಂದಿ ಮದ್ಯ ವ್ಯಸನಿಗಳು ಈ ಚಟದಿಂದ ವಿಮುಖರಾಗಿ ಸಂತೋಷ ಜೀವನ ಸಾಗಿಸುತ್ತಿದ್ದು, ಇದೆಲ್ಲಾ ಮಲ್ಲಿಕಾರ್ಜುನ ಸ್ವಾಮಿ ಪವಾಡ ಅನ್ನೋದು ಭಕ್ತಗಣದ ಅಚಲವಾದ ನಂಬಿಕೆ.