SUDDIKSHANA KANNADA NEWS/ DAVANAGERE/ DATE:05-01-2024
ದಾವಣಗೆರೆ: ಚುನಾವಣಾ ಆಯೋಗವು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಜನವರಿ 12 ರ ವರೆಗೆ ಅವಕಾಶ ಕಲ್ಪಿಸಿದ್ದು ತಿದ್ದುಪಡಿ, ಸೇರ್ಪಡೆ, ಮರಣ ಹೊಂದಿದ ಮತದಾರರನ್ನು ಕೈಬಿಡಬಹುದಾಗಿದ್ದು ಪರಿಷ್ಕರಣೆಯ ವೇಳೆ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಗುಂಜನ್ ಕೃಷ್ಣ ಅವರು ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಆಯೋಗ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು ಈ ಅವಧಿಯಲ್ಲಿ ಹೆಚ್ಚು ಹೆಚ್ಚು ಯುವ ಮತದಾರರನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡುವಾಗ ಸ್ವಯಂಪ್ರೇರಿತವಾಗಿ ಯಾವುದೇ ದಾಖಲೀಕರಣ ಮಾಡದೇ ದಾಖಲೆಗಳನ್ನಿಟ್ಟುಕೊಂಡು ಸೇರ್ಪಡೆ, ತಿದ್ದುಪಡಿ ಮತ್ತು ಮರಣ ಹೊಂದಿದ ಮತದಾರರನ್ನು ಕೈಬಿಡುವ ಕೆಲಸ ಮಾಡಬೇಕೆಂದರು.
ಮತದಾರರ ಪಟ್ಟಿ ವೀಕ್ಷಕರ ಲಾಗಿನ್ಗೆ ಸಲ್ಲಿಕೆಯಾದ ನಮೂನೆ 6,7,8 ರಡಿ ಸಲ್ಲಿಸಿದ ಅರ್ಜಿಗಳಲ್ಲಿ 208 ಅರ್ಜಿಗಳನ್ನು ಅಧಿಕಾರಿಗಳ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.
ಒಟ್ಟು ಜಿಲ್ಲೆಯಲ್ಲಿ ಜನವರಿ 4 ರ ವರೆಗೆ 727204 ಪುರುಷ, 731251 ಮಹಿಳೆಯರು, 120 ಇತರೆ, 454 ಸೇವಾ ಮತದಾರರು ಸೇರಿ 1459029 ಮತದಾರರಿದ್ದಾರೆ. ಕ್ಷೇತ್ರವಾರು ಮತದಾರರಲ್ಲಿ ಜಗಳೂರು 195558, ಹರಿಹರ 209919, ದಾವಣಗೆರೆ ಉತ್ತರ 246105, ದಕ್ಷಿಣ 215230, ಮಾಯಕೊಂಡ 193070, ಚನ್ನಗಿರಿ 200750, ಹೊನ್ನಾಳಿ 198397 ಮತದಾರರಿದ್ದಾರೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಅಶ್ವಥ್ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.