SUDDIKSHANA KANNADA NEWS/ DAVANAGERE/ DATE:08-04-2025
ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ಅಥವಾ ಶಾಂತಿಸಾಗರ ಕೆರೆಯು 5447.10 ಎಕರೆಯಷ್ಟಿದೆ. ಇದರಲ್ಲಿ 280 ಎಕರೆಯಷ್ಟು ಒತ್ತುವರಿಯಾಗಿದೆ.
ಈ ಕೆರೆ 45 ಕಿ.ಮೀ ಸುತ್ತಳತೆಯನ್ನು ಹೊಂದಿರುತ್ತದೆ. ಈ ಕೆರೆಯ ಒತ್ತುವರಿಯನ್ನು ತೆರವು ಮಾಡಲು ತಹಶೀಲ್ದಾರರು ಹಾಗೂ ಜಲಸಂಪನ್ಮೂಲ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 72 ಕೆರೆಗಳಿಂದ 10807.27 ಎಕರೆ ವಿಸ್ತೀರ್ಣವಿದೆ. 39 ಕೆರೆಗಳ ಅಳತೆ ಮಾಡಿದ್ದು 33 ಕೆರೆಗಳು ಬಾಕಿ ಇವೆ. ಇದರಲ್ಲಿ 21 ಕೆರೆಗಳಿಂದ 262 ಎಕರೆ ಒತ್ತುವರಿಯಾಗಿದೆ ಎಂದು ಗುರುತಿಸಿ 20 ಕೆರೆಗಳ 254 ಎಕರೆ ಒತ್ತುವರಿ ತೆರವು ಮಾಡಲಾಗಿದೆ.
ಒತ್ತುವರಿ ತೆರವಿಗೆ 1 ಕೆರೆ ಬಾಕಿ ಇದೆ. ಜಗಳೂರು ಕೆರೆ ಒತ್ತುವರಿಯನ್ನು ತೆರವು ಮಾಡುವ ಪ್ರಕರಣ ಹೈಕೋರ್ಟ್ನಲ್ಲಿದ್ದು ಪುನರ್ ಪರಿಶೀಲಿಸಲು ಆದೇಶವಾಗಿರುವುದರಿಂದ ಮತ್ತೆ ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ ನೀಡಿದ್ದಾರೆ.
ಈ ಸಂಬಂಧ ನಡೆದ ಸಭೆಯಲ್ಲಿ ಈ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ.ಕರಣ್ಣನವರ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಅಭಿಷೇಕ್, ರೈತ ಮುಖಂಡರಾದ ಬಲ್ಲೂರು ರವಿಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.