SUDDIKSHANA KANNADA NEWS/ DAVANAGERE/ DATE-11-06-2025
ದಾವಣಗೆರೆ: ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು 33, 24,300 ಮೌಲ್ಯದ ಚಿನ್ನಾಭರಣ, ನಗದು ಕೃತ್ಯಕ್ಕೆ ಉಪಯೋಗಿಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ನಗರದ ವಾಸಿ ಶಂಕರಯ್ಯ ಅವರು ಕಳೆದ ಮೇ 19ರಂದು ಬೆಳಿಗ್ಗೆ ಸುಮಾರು 10.30 ಗಂಟೆ ಸಮಯದಲ್ಲಿ ವಿದ್ಯಾ ನಗರ 1 ನೇ ಮೇನ್ 8 ನೇ ಕ್ರಾಸ್ ರಸ್ತೆಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ನಂತರ ಜೂನ್ 6ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲು ಇಂಟರ್ ಲಾಕ್ ಬೀಗ ಮುರಿದಿದ್ದು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು. ಬೆಳ್ಳಿ ಆಭರಣ, ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು.
ವಿದ್ಯಾನಗರ ಠಾಣೆ ನಿರೀಕ್ಷಕಿ ವೈ. ಎಸ್. ಶಿಲ್ಪಾ, ಪಿಎಸ್ಐ ವಿಶ್ವನಾಥ ಜಿ. ಎನ್. ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಪ್ರಕರಣದ ಆರೋಪಿ ಚಿತ್ರದುಗ್ರದ ಒಂದನೇ ಕ್ರಾಸ್ ನ ತಾಜಪೀರ್ ಬಡಾವಣೆಯ ಗೋಳೆರಹಟ್ಟಿ ಸಮೀಪದ ಕವಾಡಿಗರ ಹಟ್ಟಿ ವಾಸಿ ಸೈಯ್ಯದ್ ಅಕ್ಬರ್ (58) ಬಂಧಿಸಿದೆ. ಆರೋಪಿತನಿಂದ ಒಟ್ಟು 33.24 ಲಕ್ಷ ರೂ ಮೌಲ್ಯದ 332.740 ಗ್ರಾಂ ತೂಕದ ಬಂಗಾರದ ಆಭರಣಗಳು, 544 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು 1,32,000 ರೂ ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಕೆಎ63-ಎಮ್-0579 ನೇ ನಂಬರಿನ ಬಲೇನೋ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಆರೋಪಿ ಇದ್ದಾನೆ.
ಆರೋಪಿತನ ಹಿನ್ನೆಲೆ: ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ 2013 ರಲ್ಲಿ ಮನೆಕಳ್ಳತನ ಪ್ರಕರಣ, ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಯಲ್ಲಿ 2020 ರಲ್ಲಿ ಮನೆಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಶಿಲ್ಪಾ ವೈ.ಎಸ್ ಹಾಗೂ ಪಿಎಸ್‌ಐ ವಿಶ್ವನಾಥ ಜಿ ಎನ್ ಹಾಗೂ ಸಿಬ್ಬಂದಿಗಳಾದ ಆನಂದ ಎಮ್, ಶಂಕರ್ ಜಾದವ್. ಮಲ್ಲಿಕಾರ್ಜುನ ಚಂದ್ರಪ್ಪ, ಬೋಜಪ್ಪ, ಬಸವರಾಜ, ರಾಮಚಂದ್ರಪ್ಪ, ಮಾರುತಿ, ಸೋಮು ಆರ್, ರಾಘವೇಂದ್ರ ಹಾಗೂ ಜಿಲ್ಲಾ ಪೋಲೀಸ್ ಕಛೇರಿಯ ರಮೇಶ್ ಎಂ ಪಿ, ಶಿವುಕುಮಾರ್ ಬಿ ಕೆ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿಂದಿಸಿದ್ದಾರೆ.