SUDDIKSHANA KANNADA NEWS/ DAVANAGERE/ DATE:17-08-2024
ದಾವಣಗೆರೆ : ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳ ಸ್ಥಗಿತಕ್ಕೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿಯೂ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ.
ಆಯುಷ್ ಫೆಡರೇಷನ್ ಆಫ್ ಇಂಡಿಯಾದ ದಾವಣಗೆರೆ ಘಟಕವು ಸಹ ಆ.17 ರ ಇಂದು ಒಂದು ದಿನ ಬಂದ್ ಗೆ ಬೆಂಬಲಿಸಿದ್ದು, ನಮ್ಮ ಆಸ್ಪತ್ರೆಯ ಅಥವಾ ಕ್ಲಿನಿಕ್ ನ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ವೈದ್ಯಕೀಯ ಸೇವೆಗಳನ್ನು
ಸ್ಥಗಿತಗೊಳಿಸಲಾಗುತ್ತದೆ ಎಂದು ಘಟಕದ ಅಧ್ಯಕ್ಷ ಡಾ. ರುದ್ರೇಶ್ ತಿಳಿದಿದ್ದಾರೆ.
ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಯುವ ವೈದ್ಯೆಯೊಬ್ಬರನ್ನು ಆಸ್ಪತ್ರೆಯ ಆವರಣದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿ, ವಾರ ಕಳೆದರೂ ಸಾಕ್ಷ್ಯ ನಾಶ ಮತ್ತು ಅಪರಾಧಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವುದನ್ನು
ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟ್ರವ್ಯಾಪಿ ಆರೋಗ್ಯ ಸೇವೆಗಳನ್ನು ಇಂದು ಸ್ಥಗಿತಗೊಳಿಸಲು ಕರೆ ನೀಡಿದೆ.
ಇಂದು ಬೆಳಿಗ್ಗೆ 6 ರಿಂದ ಆ.18 ರ ಬೆಳಿಗ್ಗೆ 6 ವರೆಗೆ ತುರ್ತು ಸೇವೆಗಳನ್ನು ಮಾತ್ರ ಒದಗಿಸಲಾಗುತ್ತದೆ. ಇದರ ದೃಷ್ಟಿಯಿಂದ, ಹೊರರೋಗಿಗಳ ಸೇವೆಗಳು, ಚುನಾಯಿತ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿರುತ್ತದೆ. ಎಲ್ಲಾ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಮುಚ್ಚಲ್ಪಡುತ್ತವೆ. ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗಾಗಿ ಐಎಂಎ ವಿಷಾದಿಸುತ್ತದೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಹರ್ಷ ಬುಳ್ಳಾಪುರ ತಿಳಿಸಿದ್ದಾರೆ.