SUDDIKSHANA KANNADA NEWS/ DAVANAGERE/ DATE:01-04-2025
ದಾವಣಗೆರೆ: ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತ ಜೈವಿಕ ವಿಜ್ಞಾನಿಗಳೂ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರೂ ಆಗಿರುವ ಪ್ರೊ. ಎಸ್.ಆರ್. ನಿರಂಜನ ಅವರದು ಬಹುಮುಖ ವ್ಯಕ್ತಿತ್ವ. ತಮ್ಮ ಅತ್ಯುತ್ತಮ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಅಂತರಾಳದಲ್ಲಿ ಇಂದಿಗೂ ನೆಲೆಸಿರುವ ಇವರು ವಿದ್ಯಾರ್ಥಿ ಮೆಚ್ಚಿದ ಪ್ರಾಧ್ಯಾಪಕರೆನಿಸಿದ್ದಾರೆ.
ಸಂಘಟನಾ ಚತುರರೂ, ದಕ್ಷ ಆಡಳಿತಗಾರರೂ ಅಷ್ಟೇ ಅಲ್ಲದೆ ಔದಾರ್ಯ ಗುಣಸಂಪನ್ನರೂ ಆದ ಇವರು ತಮ್ಮ ಸೃಜನಾತ್ಮಕ ಚಟುವಟಿಕೆಗಳಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ.
ಪ್ರೊ. ಎಸ್.ಆರ್. ನಿರಂಜನ ಅವರು ಚಿತ್ರದುರ್ಗ ಜಿಲ್ಲೆಯ ಬಹದ್ದೂರಘಟ್ಟದಲ್ಲಿ ರಾಮಚಂದ್ರಪ್ಪ ಹಾಗೂ ರತ್ನಮ್ಮ ದಂಪತಿಗಳ ಪುತ್ರರಾಗಿ 1959ರ ಜುಲೈ 20 ರಂದು ಜನಿಸಿದರು.
1986ರಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಎಂ.ಎಸ್ಸಿ. ಪದವಿಯನ್ನು,1987ರಲ್ಲಿ ಎಂ.ಫಿಲ್ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. 1992ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದರು. ಇವರ ಮಹಾಪ್ರಬಂಧವು ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಮಹತ್ವಪೂರ್ಣವಾಗಿದ್ದು, ಸಂಶೋಧಕರಿಗೆ ಮಾರ್ಗದರ್ಶಿಯಾಗಿ ರಾಷ್ಟ್ರಾದ್ಯಂತ ಹೆಸರು ಮಾಡಿದೆ. 34ವರ್ಷ ಬೋಧಕರಾಗಿ ಸೇವೆ ಸಲ್ಲಿಸಿರುವ ಇವರ ಮಾರ್ಗದರ್ಶನದಲ್ಲಿ 21 ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿಯನ್ನು, ಇಬ್ಬರು ವಿದ್ಯಾರ್ಥಿಗಳು ಪೋಸ್ಟ್ ಡಾಕ್ಟರಲ್
ಪದವಿಯನ್ನು, 40 ವಿದ್ಯಾರ್ಥಿಗಳು ಎಂ.ಫಿಲ್. ಪದವಿಯನ್ನು ಪಡೆದುಕೊಂಡಿದ್ದಾರೆ.
213ಕ್ಕೂ ಹೆಚ್ಚು ವಿದ್ವತ್ಪೂರ್ಣ ಸಂಶೋಧನಾ ಲೇಖನಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಪ್ರತಿಷ್ಟಿತ ಜರ್ನಲ್ಗಳಲ್ಲಿ ಪ್ರಕಟಗೊಂಡಿವೆ. ಪ್ರೊ. ಎಸ್.ಆರ್. ನಿರಂಜನರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಡ್ಯಾನಿಷ್ ಸೀಡ್ಸ್ ಹೆಲ್ತ್ ಸೆಂಟರ್’ ಸಹಾಯದಿಂದ ಸ್ಥಾಪಿಸಿದ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಸಂಯೋಜಕರಾಗಿ ಅದರ ಮಹತ್ವವನ್ನು ಸಂಶೋಧನಾ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು, ಕಾರ್ಯಾಗಾರಗಳನ್ನು ನಡೆಸಿದ್ದಾರೆ. ತನ್ಮೂಲಕ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಶ್ವಮಟ್ಟದ ಸೌಲಭ್ಯಗಳು ದೊರಕುವುದಕ್ಕೆ ಕಾರಣೀಕರ್ತರಾಗಿದ್ದಾರೆ.
ಜಗತ್ತಿನ ಪ್ರತಿಷ್ಟಿತ ‘ಡೆನ್ಮಾರ್ಕಿನ ಜೈವಿಕ ತಂತ್ರಜ್ಞಾನ ಅಭಿವೃದ್ಧಿ ಏಜೆನ್ಸಿ’ಗೆ ಭಾರತದ ಪರಿಣಿತ ಸಂದರ್ಶಕ ವಿಜ್ಞಾನಿಯಾಗಿ ಏಳು ಬಾರಿ ಭೇಟಿ ನೀಡಿದ್ದಾರೆ. ಯು.ಎಸ್.ಎ, ಯು.ಕೆ, ಬಾಂಗ್ಲಾದೇಶ, ಚೀನಾ, ವಿಯೆಟ್ನಾಂ, ನೇಪಾಳ ಮುಂತಾದ ದೇಶಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ, ವಿಜ್ಞಾನಿಯಾಗಿ ಭೇಟಿ ನೀಡಿರುವುದು ಇವರ ವಿದ್ವತ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರೊ. ನಿರಂಜನರವರು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ್ದಾರೆ. ಇವರ ಸಂಶೋಧನಾತ್ಮಕ ಕರ್ತವ್ಯನಿಷ್ಠೆಗೆ ವಿಶ್ವೇಶ್ವರಯ್ಯ ಪ್ರಶಸ್ತಿ, ಡಾ. ರಾಜಾರಾಮನ್ ಪ್ರಶಸ್ತಿ, ಸಿ.ವಿ ರಾಮನ್ ಪ್ರಶಸ್ತಿಗಳಷ್ಟೇ ಅಲ್ಲದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜೀವಮಾನದ ಸಾಧನಾ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾರೆ.
ಪ್ರೊ. ಎಸ್.ಆರ್. ನಿರಂಜನರವರು ಜೈವಿಕ ವಿಜ್ಞಾನಿಯಾಗಿ, ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾಗಿ, ದಕ್ಷ ಆಡಳಿತಗಾರರಾಗಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಲಿದೆ.