SUDDIKSHANA KANNADA NEWS/ DAVANAGERE/ DATE:27-08-2024
ದಾವಣಗೆರೆ: ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 369ರಲ್ಲಿನ ಸಮಸ್ಯೆಗಳ ಕುರಿತು ಶಾಸಕ ಬಸವರಾಜು ವಿ. ಶಿವಗಂಗಾ ಹಾಗೂ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಚನ್ನಗಿರಿ ಪಟ್ಟಣ, ದಿಗ್ಗೇನಹಳ್ಳಿ ಮತ್ತು ಅಜ್ಜಿಹಳ್ಳಿ ಮೂಲಕ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಕೂಡ ಉಂಟಾಗಿದೆ, ದಿಗ್ಗೇನಹಳ್ಳಿ ಗ್ರಾಮಕ್ಕೆ ಹೋಗಲು ಅಂಡರ್ ಪಾಸ್ ವ್ಯವಸ್ಥೆ ಇಲ್ಲದಿರುವುದು, ಚನ್ನಗಿರಿ ಪಟ್ಟಣ ಬಳಿ ನಿರ್ಮಾಣವಾಗುತ್ತಿರುವ ಹೊಸ ಬಡಾವಣೆಗಳಿಗೆ ಮತ್ತು ಅಜ್ಜಿಹಳ್ಳಿ ಸರ್ಕಾರಿ ಶಾಲೆಗೂ ಹೆದ್ದಾರಿ ನಿರ್ಮಾಣದಿಂದ ತೊಂದರೆ ಉಂಟಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಮತ್ತು ಬಸವರಾಜು ವಿ ಶಿವಗಂಗಾ ಸ್ಥಳಗಳಿಗೆ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಿಗ್ಗೇನಹಳ್ಳಿ ಬಳಿ ಅಂಡರ್ ಪಾಸ್ ವ್ಯವಸ್ಥೆ ಇಲ್ಲದಿರುವ ಕಾರಣ ಪಟ್ಟಣಕ್ಕೆ ಹಾಗೂ ಇತರೆ ಊರುಗಳಿಗೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಅಂಡರ್ ಪಾಸ್ ವ್ಯವಸ್ಥೆ ಇಲ್ಲದ ಕಾರಣ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ, ಈ ಕಾರಣ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪರಿಶೀಲನೆ ಮಾಡಲಾಯಿತು.
ಇನ್ನೂ ಅಜ್ಜಿಹಳ್ಳಿ ಸರ್ಕಾರಿ ಶಾಲೆ ಬಳಿ ಹೆದ್ದಾರಿ ಹಾದು ಹೋಗಿದ್ದು ಶಾಲಾ ಮಕ್ಕಳಿಗೂ ತೊಂದರೆ ಉಂಟಾಗುತ್ತಿದೆ. ಇನ್ನೂ ಚನ್ನಗಿರಿ ಪಟ್ಟಣ ಬಳಿ ನಿರ್ಮಾಣವಾಗುತ್ತಿರುವ ಲೇ ಔಟ್ಗಳಿಗೂ ಸಮಸ್ಯೆ ಎದುರಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ ಈ ಕಾರಣ ಈ ಸಮಸ್ಯೆಗಳ ಪರಿಹಾರ ಸೂಚಿಸಲು ಪರಿಶೀಲನೆ ಮಾಡಲಾಯಿತು. ಬಳಿಕ ಆಡಳಿತ ಸೌಧದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿ ಜಂಟಿಯಾಗಿ ಸಭೆ ನಡೆಸಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇಂಜಿನಿಯರ್ ಗಳು ಮತ್ತು ಪಿಡಬ್ಲ್ಯೂ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸುಧೀರ್ಘ ಚರ್ಚೆ ನಡೆಸಿದರು. ಸಾರ್ವಜನಿಕರಿಗೆ ಹೆದ್ದಾರಿ
ನಿರ್ಮಾಣದಿಂದ ಸಮಸ್ಯೆ ಉಂಟಾಗಿದ್ದು, ಇದನ್ನು ಪರಿಹರಿಸಬೇಕಿದ್ದು, ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕರು ಸೂಚಿಸಿದರು.
ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.