ನಾಲ್ಕೂ ನಿಗಮಗಳ ಎಲ್ಲಾ ಮಾದರಿಯ ಬಸ್ಗಳ ಟಿಕೆಟ್ ದರ ಶೇ15ರಷ್ಟು ಏರಿಕೆ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಇಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರ ಟಿಕೆಟ್ ದರ ಏರಿಸಲು ಮುಂದಾಗಿದ್ದಕ್ಕೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಕ್ಷಮೆ ಕೇಳಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮುಖವಾಡ ಧರಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಪ್ರಯಾಣಿಕರ ಕಾಲು ಹಿಡಿದು ಕ್ಷಮೆ ಕೇಳಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಪ್ರವೇಶಿಸುತ್ತಿದ್ದ ವೇಳೆ ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ವಿಪಕ್ಷ ನಾಯಕ ಆರ್. ಅಶೋಕ್ “ವಶಕ್ಕೆ ಪಡೆದರೆ ಕೋರ್ಟ್ಗೆ ಹೋಗುವೆ. ನಾವು ಪ್ರತಿಭಟನೆ ಮಾಡಲು ಬಂದಿಲ್ಲ. ಪ್ರಯಾಣಿಕರಿಗೆ ಹೂವು ಕೊಡಲು ಬಂದಿದ್ದೆನೆ. ಹೊಡಿಯುತ್ತೀಯಾ, ಹೊಡಿ, ಹೊಡಿ, ಏಯ್ ನಾನು ವಿರೋಧ ಪಕ್ಷದ ನಾಯಕ, ನನ್ನನ್ನು ಮುಟ್ಟಿದರೆ ಹುಷಾರ್. ಜನ್ಮದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೆ ಮಾಡುವೆ.” ಎಂದು ಅಬ್ಬರಿಸಿದರು.