SUDDIKSHANA KANNADA NEWS/ DAVANAGERE/ DATE:25-02-2025
ಬೆಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು, ಅಸಂಘಟಿತ ಕಾರ್ಮಿಕರಾದ ಹಮಾಲರು, ಚಿಂದಿ ಆಯುವವರು, ಮನೆಗೆಲಸದವರು, ಟೈಲರ್, ಮೆಕ್ಯಾನಿಕ್, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ ಒಟ್ಟು 11 ವರ್ಗಗಳನ್ನು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ಆದೇಶಿಸಿದೆ.
ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೊಟೋಗ್ರಾಫರ್ಸ್ ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ, ಸಭಾ ಭವನ, ಟೆಂಟ್, ಪೆಂಡಾಲ್ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಗಿಗ್ ವೃತ್ತಿ ನಿರ್ವಹಿಸುತ್ತಿರುವ ಡೆಲಿವರಿ ಕಾರ್ಮಿಕರು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕ ಅಲೆಮಾರಿ ಪಂಗಡ ಒಳಗೊಂಡಂತೆ ಒಟ್ಟು 23 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ನೋಂದಾಯಿಸಿ, ಸ್ಮಾರ್ಟ್ ಕಾರ್ಡ್ ವಿತರಿಸಲು ಅನುಮತಿಸಿದೆ.
ಅರ್ಹತೆಗಳು:
ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯಡಿ ಫಲಾನುಭವಿಗಳಾಗಲು, ಕಾರ್ಮಿಕರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಅರ್ಜಿದಾರರು 18 ರಿಂದ 60 ವರ್ಷದೊಳಗಿರಬೇಕು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಡಿ ನೋಂದಾಯಿತರಾಗಿ ಸಂಬಂಧಿಸಿದ ವೃತ್ತಿಯಲ್ಲಿ ಸಕ್ರಿಯನಾಗಿರಬೇಕು. ಆದರೆ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಬಾರದು.
ಅಪಘಾತ ಪರಿಹಾರ ಸೌಲಭ್ಯ: ಅಂಬೇಡ್ಕರ ಸಹಾಯ ಹಸ್ತ ಯೋಜನೆಯಡಿ ನೋಂದಾಯಿತರಾದ ಕಾರ್ಮಿಕರ ಮರಣ ಪ್ರಕರಣದಲ್ಲಿ ತಲಾ ರೂ.1 ಲಕ್ಷ ರೂ.ಗಳು ಮತ್ತು ಅಪಘಾತ ಗಂಭೀರತೆ ಆಧಾರದಲ್ಲಿ (ಶೇಕಡವಾರು ದುರ್ಬಲತೆ ಆಧಾರದ ಮೇಲೆ) ರೂ. 1 ಲಕ್ಷದವರೆಗೆ, ಆಸ್ಪತ್ರೆ ವೆಚ್ಚ ಮರುಪಾವತಿ ರೂ.50,000, ಸಹಜ ಮರಣ ಪರಿಹಾರ (ಅಂತ್ಯ ಕ್ರಿಯೆ ಧನಸಹಾಯ) ವೆಚ್ಚ ರೂ. 10,000 ಪರಿಹಾರ ನೀಡಲಾಗುತ್ತದೆ.
ಪರಿಹಾರ ಪಡೆಯುವ (ಕ್ಷೇಮ್) ವಿಧಾನ: ಅರ್ಜಿದಾರ ಅಥವಾ ಫಲಾನುಭವಿಯು ಅಪಘಾತ ಪರಿಹಾರಕ್ಕಾಗಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ಸಹಜ ಮರಣ ಪ್ರಕರಣಗಳಲ್ಲಿ ಮರಣ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ ನಿಗದಿತ ನಮೂನೆಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲೆಗಳು:
ಅರ್ಜಿದಾರನು ತನ್ನ ನೋಂದಾಯಿತ ಗುರುತಿನ ಚೀಟಿ, ನಿಗದಿತ ನಮೂನೆಯಲ್ಲಿ ಉದ್ಯೋಗ ಪ್ರಮಾಣ ಪತ್ರ, ಪ್ರಥಮ ವರ್ತಮಾನ ವರದಿ ಪ್ರತಿ, ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಆಸ್ಪತ್ರೆಯ ಮೂಲ ಬಿಲ್ಗಳು, ಆಸ್ಪತ್ರೆ ವೆಚ್ಚ ಮರುಪಾವತಿ ಪ್ರಕರಣಗಳಲ್ಲಿ, ಮೂಲ ಡಿಸ್ಮಾರ್ಜ್ ಸಾರಾಂಶ, ಸರ್ಕಾರಿ ವೈದ್ಯಕೀಯ ದುರ್ಬಲತೆ ಪ್ರಮಾಣ ಪತ್ರ, ಕಂದಾಯ ಇಲಾಖೆಯ ವಂಶ ವೃಕ್ಷ ಪ್ರಮಾಣ ಪತ್ರ, ಪಡಿತರ ಚೀಟಿ, ಫಲಾನುಭವಿಯ ಆಧಾರ ಕಾರ್ಡ್ ಪ್ರತಿ, ನಾಮನಿರ್ದೇಶಿತರ, ಫಲಾನುಭವಿಯ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಮತ್ತು ಇತರೆ ದಾಖಲಾಲೆಗಳನ್ನು ಸಲ್ಲಿಸಬೇಕು.
ಸಹಜ ಮರಣ ಪರಿಹಾರ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ನೋಂದಾಯಿತ ಗುರುತಿನ ಚೀಟಿ, ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಫಲಾನುಭವಿ ಮತ್ತು ನಾಮನಿರ್ದೇಶಿತರ ಆಧಾರ ಕಾರ್ಡ್ ಪ್ರತಿ, ನಾಮನಿರ್ದೇಶಿತರ ಬ್ಯಾಂಕ್ ಪಾಸ್ಬುಕ್ ಪ್ರತಿ ಹಾಗೂ ಅವಶ್ಯಕವಿರುವ ಇತರೆ ದಾಖಲಾತಿಗಳು. ಎಲ್ಲಾ ಪರಿಹಾರ ಮೊತ್ತವನ್ನು ಫಲಾನುಭವಿ, ನಾಮನಿರ್ದೇಶಿತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಫಲಾನುಭವಿಯು ಮರಣದ ಸಮಯದಲ್ಲಿ ಅವಿವಾಹಿತನಾಗಿದ್ದಲ್ಲಿ ತಾಯಿ ತಂದೆ ಹಾಗೂ ವಿವಾಹಿತನಾಗಿದ್ದಲ್ಲಿ ಹೆಂಡತಿ ಮತ್ತು ಮಕ್ಕಳು ಕಾನೂನುಬದ್ಧ ವಾರಸುದಾರರಾಗಿರುತ್ತಾರೆ.
ಕ್ಷೇಮ್ ಅರ್ಜಿ ತಿರಸ್ಕರಿಸಲು ಕಾರಣಗಳು: ಫಲಾನುಭವಿಯು ಆತ್ಮಹತ್ಯೆ, ಅಪಘಾತದ ವೇಳೆ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿದಲ್ಲಿ, ಬುದ್ಧಿಭ್ರಮಣೆಯ ಕಾರಣ ಅಪಘಾತ ಸಂಭವಿಸಿದಲ್ಲಿ, ಫಲಾನುಭವಿಯು ಅಪರಾಧದ ಉದ್ದೇಶದ ಕಾನೂನು ಉಲ್ಲಂಘನೆಯ ಕಾರಣ ಅಪಘಾತ ಸಂಭವಿಸಿದಲ್ಲಿ, ಯುದ್ಧ, ಆಕ್ರಮಣ, ವಿದೇಶಿ ವೈರಿಯ ಕೃತಿ, ದಂಗೆ, ಕ್ರಾಂತಿ, ಮಿಲಿಟರಿ ಅಥವಾ ಅಧಿಕಾರ ಕಿತ್ತುಕೊಳ್ಳುವುದು, ಹಿಡಿತ ಸೆರೆಹಿಡಿ, ಬಂಧನ ಕಾರಣದಿಂದಾಗಿ ಸಂಭವಿಸಿದ ಅಪಘಾತದಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಫಲಾನುಭವಿಗಳಾದ ಅಸಂಘಟಿತ ವಲಯದ ಕಾರ್ಮಿಕರು ಈ ಅಂಬೇಡ್ಕರ ಸಹಾಯ ಹಸ್ತ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಸಚಿವರು ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.