SUDDIKSHANA KANNADA NEWS/ DAVANAGERE/ DATE:04-03-2025
ಬೆಂಗಳೂರು: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ ಜಿಲ್ಲೆಯಲ್ಲಿ ಬಿಸಿಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ, ನಾಗರಿಕರು ಮಧ್ಯಾಹ್ನ 12 ರಿಂದ 3 ಗಂಟೆಯ ನಡುವೆ ಬಿಸಿಲಿನಲ್ಲಿ
ಹೋಗುವುದನ್ನು ತಪ್ಪಿಸಬೇಕು.
ಸಾಕಷ್ಟು ನೀರು ಕುಡಿಯುವದರ ಜೊತೆಗೆ ಹಗುರವಾದ ಹತ್ತಿಬಟ್ಟೆ ಧರಿಸುವುದು, ಟೋಪಿ, ಛತ್ರಿ, ಕನ್ನಡಕ ಬಳಸಿ ಮತ್ತು ಶ್ರಮದಾಯಕ ಚಟುವಟಿಕೆಗಳಿಂದ ದೂರವಿರಬೇಕು.
ಈ ಕುರಿತು ಧಾರವಾಡ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಸೂಚನೆ ಕೊಡಲಾಗಿದೆ. ನೀಡಿರುವ ಅವರು, ಬಿಸಿಗಾಳಿಯಿಂದ ಸಾರ್ವಜನಿಕರು ರಕ್ಷಿಸಿಕೊಳ್ಳುವ ಕುರಿತು ರಾಜ್ಯ ಆರೋಗ್ಯ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ನಿಲ್ಲಿಸಿದ ವಾಹನದಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಬಿಡಬೇಡಿ. ಮೂರ್ಛೆ ಅಥವಾ ಅನಾರೋಗ್ಯ ಕಾಣಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಓ.ಆರ್.ಎಸ್, ಮನೆಯಲ್ಲಿ ತಂಪಾಗಿರಿಸಿದ ಲಸ್ಸಿ, ಮಜ್ಜಿಗೆ, ನಿಂಬೆ ನೀರು ಸೇರಿದಂತೆ ತಂಪು ಪಾನೀಯ ಹೆಚ್ಚಾಗಿ ಸೇವಿಸಬೇಕು. ಪ್ರಾಣಿಗಳಿಗೆ ನೆರಳು ಮತ್ತು ನೀರು ಒದಗಿಸಿ, ಅವುಗಳಿಗೆ ಸಾಕಷ್ಟು ನೀರು ಕುಡಿಯಲು ನೀಡಬೇಕು. ನಿಮ್ಮ ಮನೆಯನ್ನು ತಂಪಾಗಿ ಇರಿಸಿ, ಪರದೆಗಳು, ಶರ್ಟಗಳು ಅಥವಾ ಸನ್ಶೆಡ್ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಬೇಕು.
ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭೀಣಿಯರಿಗೆ, ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಬಿಸಿಲಿನ ಝಳವು ಸಾಕಷ್ಟು ತೊಂದರೆ ನೀಡುತ್ತದೆ. ಶಾಖಾ ಸೆಳೆತ (ಹೀಟ್ ಕ್ರ್ಯಾಂಪ್): ಶಾಖಾ ಸೆಳೆತದಿಂದ ಜ್ವರ (102 ಡಿಗ್ರಿಗಿಂತ ಕಡಿಮೆ) ಹಾಗೂ ಮೈಯಲ್ಲಿ ಊತ ಕಾಣಿಸಿಕೊಳ್ಳುತ್ತದೆ.
ಪರಿಹಾರ:
ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ ಹಾಗೂ ತಂಪಾದ ಜಾಗಗಳಿಗೆ ಹೋಗಬೇಕು. ತಂಪಾದ, ಶುದ್ಧವಾದ ನೀರು ಕುಡಿಯುವುದು ಹಾಗೂ ಓ.ಆರ್.ಎಸ್ ಮತ್ತು ಗ್ಲೂಕೋಸ್ನ್ನು ಬಳಸಬೇಕು. ಹೃದ್ರೋಗ ಸಮಸ್ಯೆ ಇದ್ದರೆ ಅಥವಾ ಇತರೆ ಯಾವುದೇ ರೋಗ ಲಕ್ಷಣಗಳಿದ್ದರೆ ಸಕಾಲಕ್ಕೆ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು.
ಶಾಖದ ಹೊಡೆತ (ಹೀಟ್ ಎಗ್ಸಾಷನ್):
ಶಾಖದ ಹೊಡೆತದಿಂದ ವಿಪರೀತ ಬೆವರುವಿಕೆ, ನಿಶ್ಯಕ್ತಿ, ಸುಸ್ತು, ತಲೆ ಸುತ್ತು, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತವಾಗುತ್ತದೆ.
ಪರಿಹಾರ:
ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ. ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ, ನೀರನ್ನು ನಿಧಾನವಾಗಿ ಕುಡಿಸಬೇಕು. ದೇಹದ ಉಷ್ಣಾಂಶವನ್ನು ನಿಯಂತ್ರಿಸಲು ಮೈಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿಬೇಕು. ವಾಂತಿ ಹಾಗು ಇತರೆ ರೋಗ ಲಕ್ಷಣಗಳು ಇದ್ದರೆ ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಬೇಕು.
ಶಾಖಾಘಾತ (ಹೀಟ್ ಸ್ಟ್ರೋಕ್):
ಶಾಖಾಘಾತದಿಂದ ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗುವುದು. ಮನಸ್ಸಿನಲ್ಲಿ ಗೊಂದಲ, ಮೂರ್ಛೆ ರೋಗ ಹಾಗೂ ವ್ಯಕ್ತಿಯ ಕೋಮಾ ಸ್ಥಿತಿಗೆ ಹೋಗಬಹುದು. ಚರ್ಮ ಸುಡುವುದು ಅಥವಾ ಕೆಂಪಾದ ಚರ್ಮ, ತಲೆ ನೋವು, ವಾಕರಿಕೆ ಹಾಗೂ ವಾಂತಿ, ಅತಿಯಾದ ನಾಡಿ ಮಿಡಿತ, ಪ್ರಜ್ಞೆ ತಪ್ಪುವಿಕೆ ಆಗುತ್ತದೆ.
ಪರಿಹಾರ:
ತುರ್ತು ವೈದ್ಯಕೀಯ ಸಹಾಯವಾಣಿ 104 ಕ್ಕೆ ಕರೆ ಮಾಡಿ, ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು. ವ್ಯಕ್ತಿಯನ್ನು ಹೆಚ್ಚು ಗಾಳಿಯಾಡುವಂತಹ ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿಬೇಕು. ವ್ಯಕ್ತಿಗೆ ಉಸಿರಾಟದ ಶ್ವಾಸನಾಳದ ತೊಂದರೆಗಳಿದ್ದರೆ ಆತ ಅಶಕ್ತನಾದರೆ ತಕ್ಷಣ ಕುಡಿಯಲು ನೀರು ನೀಡಬಾರದು. ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಬೇಕು.
ಹೊರಾಂಗಣದಲ್ಲಿ:
ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ನಡುವೆ ಹೊರಗಡೆ ದೈಹಿಕ ಕೆಲಸ ಮಾಡುವುದನ್ನು ತಪ್ಪಿಸಿ. ಅದು ಸಾಧ್ಯವಾಗದಿದ್ದರೆ, ತಿಳಿಬಣ್ಣದ ಹತ್ತಿಯಿಂದ ತಯಾರಿಸಿದ ನೈಸರ್ಗಿಕ ಬಟ್ಟೆಗಳನ್ನು ಧರಿಸಬೇಕು. ಪಾಲಿಯಿಸ್ಟರ್ ಹಾಗೂ ಸಿಂಥೆಟಿಕ್ ಬಟ್ಟೆಗಳನ್ನು ಆದಷ್ಟು ಉಪಯೋಗಿಸಬಾರದು. ಟೋಪಿ ಅಥವಾ ಹತ್ತಿಯ ಬಟ್ಟೆಗಳಿಂದ ತಲೆ ಮುಚ್ಚಿಕೊಳ್ಳಬೇಕು. ಸಾಧ್ಯವಾದರೆ ಒಂದು ಸ್ವಚ್ಚ, ಒದ್ದೆ ಬಟ್ಟೆಯನ್ನು ತಲೆ, ಕತ್ತಿನ ಸುತ್ತ ಧರಿಸಲು ಪ್ರಯತ್ನಿಸಬೇಕು. ಸಾಧ್ಯವಾದರೆ ಬೀಸಣಿಗೆಯನ್ನು ಬಳಸಬೇಕು. ದೂಳು, ಹೊಗೆ, ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಳಸುವುದು ಸೂಕ್ತವಾಗಿದೆ. ಕೆಲಸದ ಮಧ್ಯದಲ್ಲಿ ಆಗಾಗ್ಗೆ ಸಣ್ಣ ವಿಶ್ರಾಂತಿಯನ್ನು ತೆಗೆದು ಕೊಳ್ಳಬೇಕು. ವಿಶ್ರಾಂತಿಯ ಸಮಯದಲ್ಲಿ ನೆರಳಿನಲ್ಲಿ ಇರಬೇಕು. ಏನೇ ತಿನ್ನುವ ಮೊದಲು ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
ಒಳಾಂಗಣದಲ್ಲಿ:
ಹೊರಗಿನ ಬಿಸಲು, ಧೂಳು, ಹೊಗೆ ಹಾಗೂ ಮಾಲಿನ್ಯಗಳಿಂದ ರಕ್ಷಿಸಿಕೊಳ್ಳಬೇಕು. ಇಕ್ಕಟ್ಟಾದ, ಕತ್ತಲೆಯ ಕೋಣೆ, ತುಂಬಾ ಬಿಸಿವಾತಾವರಣ ಇದ್ದಾಗ ಸಾಧ್ಯವಾದಷ್ಟು ಆ ಸ್ಥಳವನ್ನು ತಂಪಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಕಿಟಕಿಗಳನ್ನು ತೆರೆಯಬೇಕು ಮತ್ತು ಪ್ಯಾನ್ಗಳನ್ನು ಬಳಸಬೇಕು.
ಕೊಠಡಿಯ ಉಷ್ಣತೆ 35 ಡಿ.ಸೆಂಟಿಗ್ರೆಡ್ ಗಿಂತ ಕಡಿಮೆಯಿದ್ದಲ್ಲಿ ಸೀಲಿಂಗ್ ಫ್ಯಾನ್ಗಳನ್ನು ಬಳಸಿ, ಒಂದು ವೇಳೆ ಉಷ್ಣಾಂಶ 35 ಡಿಗ್ರಿಸೆಂಟಿಗ್ರೇಡ್ ಗಿಂತಲೂ ಹೆಚ್ಚಾಗಿದ್ದರೆ ಮತ್ತು ಒಣಗಾಳಿ ಇದ್ದರೆ, ಫ್ಯಾನ್ ಬಳಸಬೇಕು. ಮುಚ್ಚಿದ ಕೋಣೆಯಲ್ಲಿ ನಿರಂತರ ಸಂಚರಿಸುವ ಬಿಸಿಗಾಳಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಸಾಧ್ಯವಾದಷ್ಟು ಟೇಬಲ್ ಫ್ಯಾನ್ ಹಾಗೂ ಏರ್ ಕೂಲರ್ಸ್ ಬಳಸಬೇಕು. ಬಲ್ಬ್ ಹಾಗೂ ಇತರೆ ವಿದ್ಯುತ್ ಸಾಧನಗಳನ್ನು ಆದಷ್ಟು ಕಡಿಮೆ ಉಪಯೋಗಿಸಬೇಕು.
ಹಗಲಿನಲ್ಲಿ ಹೆಚ್ಚು ಸೂರ್ಯನ ಬೆಳಕು ಬೀಳುವ ಕಿಟಕಿಗಳಿಗೆ ವೆಟಿವರ್, ಒಣಹುಲ್ಲಿನಿಂದ ಮಾಡಿದ ನೈಸರ್ಗಿಕ ಪರದೆಗಳನ್ನು ಬಳಸಬೇಕು. ಲೋಹದ ಅಥವಾ ಪ್ಲಾಸ್ಟಿಕ್ ಪರದೆಗಳನ್ನು ಬಳಸಬಾರದು. ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆದಿಡುವುದು ಉತ್ತಮ. ಮನೆಯ ಎಲ್ಲೆಡೆ ನೀರನ್ನು ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟರೆ ಅದು ಆವಿಯಾಗಿ ವಾತಾವರಣವನ್ನು ತಂಪಾಗಿಡುತ್ತದೆ. ಕಿಟಕಿಗಳಲ್ಲಿ ಹಾಗೂ ಸಾಧ್ಯವಾದರೆ ಮನೆಯ ಒಳಗೂ ಸಹ ಗಿಡಗಳನ್ನು ಇಡಬಹುದು. ಮನೆಯ ಒಳಗೂ ಹೊರಗು ಸಾಧ್ಯವಾದಷ್ಟು ಗಿಡಗಳು ಇರುವಂತೆ ನೊಡಿಕೊಳ್ಳಬೇಕು. ಕಟ್ಟಡಕ್ಕೆ ಆದಷ್ಟು ತಿಳಿಬಣ್ಣಗಳನ್ನು ಉಪಯೋಗಿಸುವುದು ಉತ್ತಮ. ಶಾಖವನ್ನು ಹೀರಿಕೊಳ್ಳುವ ಲೋಹ ಹಾಗೂ ತಗಡಿನ ಛಾವಣಿಗಳ ಬದಲಾಗಿ, ಚಾವಣಿಯನ್ನು ಎತ್ತರಿಸುವುದು.
ನೈಸರ್ಗಿಕವಾದ ಮಣ್ಣಿನ, ಹುಲ್ಲಿನ, ತೆಂಗು ಅಥವಾ ಅಡಿಕೆ ಗರಿಗಳ ಛಾವಣಿಗಳನ್ನು ಬಳಸುವುದು ಮತ್ತು ಕಡಿಮೆ ಎತ್ತರವಿರುವ ಛಾವಣಿಗಳ ಮೇಲೆ ತೆಂಗು ಅಥವಾ ಅಡಿಕೆ ಗರಿಗಳನ್ನು ಬಳಸಬೇಕು.
ಆಹಾರ ಸೇವನೆ:
ದೇಹದಲ್ಲಿ ನೀರಿನ ಅಂಶ ಉಳಿಸಿಕೊಳ್ಳುವಂತ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು. ಸ್ಥಳೀಯ ಲಭ್ಯವಿರುವ ಹಸಿ ತರಕಾರಿಗಳಾದ ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡವಲಕಾಯಿ, ಕುಂಬಳಕಾಯಿ ಹಾಗೂ ಗೆಡ್ಡೆಗಳಾದ ಬೀಟ್ ರೂಟ್, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ಸೊಪ್ಪುಗಳು ಇತ್ಯಾದಿಗಳನ್ನು ಬಳಸಬೇಕು. ನೆಲ್ಲಿಕಾಯಿ, ಬೆಟ್ಟದ ನೆಲ್ಲಿಕಾಯಿ, ಬಾಳೆ ಹಣ್ಣು, ಕಲ್ಲಂಗಡಿ, ಮಾವು, ಮೂಸಂಬಿ, ಕಿತ್ತಳೆ ಹಣ್ಣುಗಳನ್ನು ಸೇವಿಸಬೇಕು.
ರಾಗಿಹಿಟ್ಟು ಹಾಗೂ ಹೆಸರು ಬೇಳೆಗಳನ್ನು ಆಹಾರದಲ್ಲಿ ಬಳಸಿದರೆ ಉತ್ತಮ. ದೇಹವನ್ನು ತಂಪಾಗಿಸುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಹಾಗೂ ಕರಿಬೇವಿನಂತಹ ಮೂಲಿಕೆಗಳನ್ನು ಮೊಸರಿನಲ್ಲಿ ಬೆರಸಿ ಮಾಡಲಾಗುವ ತಂಬುಳಿ, ಅಂಬಲಿ, ನೀರು ಪದಾರ್ಥಗಳು ಅಥವಾ ಸ್ಥಳೀಯ ದ್ರವ ಆಹಾರಗಳನ್ನು ಸೇವಿಸಬೇಕು. ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ತುಪ್ಪವನ್ನು ಬಳಸುವುದು ಉತ್ತಮ. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಖಾರದ ಮತ್ತು ಅಧಿಕ ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಮತ್ತು ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಬೇಕು.
ತಂಪು ಪಾನೀಯ: ತೀರಾ ತಂಪಾದ ನೀರನ್ನು ಕುಡಿಯಬಾರದು. ಇದರಿಂದ ಹೊಟ್ಟೆಯ ಸ್ನಾಯುಸೆಳೆತ ಹಾಗೂ ಅಜೀರ್ಣ ಉಂಟಾಗಬಹುದು. ಮದ್ಯ, ಚಹಾ, ಕಾಫಿ, ಸೋಡಾ ಹಾಗೂ ಇತರ ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಇರಬೇಕು. ಇದು ದೇಹದ ತಾಪವನ್ನು ಹೆಚ್ಚಿಸುತ್ತದೆ ಹಾಗೂ ನಿರ್ಜಲೀಕರಣ (ಡಿ ಹೈಡ್ರೇಶನ್) ಉಂಟುಮಾಡುವುದು. ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು.
ಇತರ ಸ್ಥಳೀಯ ಪೇಯಗಳಾದ ಮನೆಯಲ್ಲೇ ಸಿದ್ದಪಡಿಸಿದ ಲಸ್ಸಿ, ಅಕ್ಕಿ ಗಂಜಿ ಬಳಸುವುದು ಸೂಕ್ತ. ಓ.ಆರ್.ಎಸ್. ಹಾಗೂ ಗ್ಲೂಕೋಸ್ ಮಿಶ್ರಿತ ನೀರನ್ನು ಮನೆಯಿಂದ ಹೊರಗಡೆ ಇದ್ದಾಗ ಹೆಚ್ಚಾಗಿ ಸೇವಿಸಬೇಕು.
ಚರ್ಮ ಹಾಗೂ ದೇಹದ ಕಾಳಜಿ: ಶರೀರದ ಮೇಲೆ ಬಿಸಿಲ ಬೊಬ್ಬೆಗಳು ಹಾಗೂ ಮೈ ಮೇಲೆ ಸುಟ್ಟ ಕಲೆಗಳು ಆಗವುದು ಸಾಮಾನ್ಯವಾಗಿರುತ್ತದೆ. ತ್ವಚೆಗೆ ಹಿತ ನೀಡುವಂತಹ, ತಂಪಾಗಿ ಇಡುವ ಗಿಡ ಮೂಲಿಕೆಗಳ ಲೇಪನ ಮಾಡಿ. ಸ್ನಾನ ಮಾಡುವಾಗ ನೀರಿನಲ್ಲಿ ಅಡುಗೆ ಸೋಡಾ ಬಳಸಿ. ತೆಂಗಿನೆಣ್ಣೆ, ಹರಳೆಣ್ಣೆ ಹಾಗೂ ಎಳ್ಳೆಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ. ಬೆಳಗಿನ ಹೊತ್ತು ಹಗುರವಾದ ವ್ಯಾಯಾಮ ಮಾಡಬೇಕು.