SUDDIKSHANA KANNADA NEWS/ DAVANAGERE/ DATE:08-04-2025
ದಾವಣಗೆರೆ: ಕೆರೆಯಲ್ಲಿನ ಮಣ್ಣನ್ನು ರೈತರ ಜಮೀನುಗಳಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿ, ಮಣ್ಣು ತೆಗೆಯಲು ಸ್ಥಳವನ್ನು ಗುರುತು ಮಾಡಿಕೊಡುವ ಜವಾಬ್ದಾರಿ ಆಯಾ ಇಲಾಖೆ ಅಧಿಕಾರಿಗಳದ್ದಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆರೆ ಒತ್ತುವರಿ ತೆರವು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಕೆರೆಯ ಮಣ್ಣನ್ನು ರೈತರ ಜಮೀನುಗಳಿಗೆ ನೀಡುವುದರಿಂದ ಹೂಳೆತ್ತಿದಂತಾಗುತ್ತದೆ. ಮತ್ತು ಮಳೆಗಾಲದಲ್ಲಿ ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚು ಮಾಡಲು ಅವಕಾಶ ಇದ್ದು ರೈತರ ತೋಟ, ಜಮೀನುಗಳಿಗೆ ಹೊಸ ಮಣ್ಣು ಹಾಕವುದರಿಂದ ಬೆಳೆಯು ಉತ್ತಮವಾಗಿ ಬಂದು ರೈತರಿಗೂ ಅನುಕೂಲ, ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿರುವುದರಿಂದ ಸ್ವಯಂ ಪ್ರೇರಿತವಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿ ಸಣ್ಣ ನೀರಾವರಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ, ಜಿಲ್ಲಾ ಪಂಚಾಯತ್ ಕೆರೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಜಾಗ ಗುರುತಿಸಿ ರೈತರಿಗೆ ಹೂಳೆತ್ತಲು ಅವಕಾಶ ಮಾಡುವ ಕೆಲಸ ಮಾಡಬೇಕೆಂದು ತಿಳಿಸಿದರು.
ಕೆರೆ ಒತ್ತುವರಿ ತೆರವಿಗೆ ಕ್ರಮ; ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳ ವ್ಯಾಪ್ತಿಯಲ್ಲಿ 538 ಕೆರೆಗಳಿದ್ದು ಇದರಲ್ಲಿ ಸಣ್ಣ ನೀರಾವರಿ ಇಲಾಖೆಯ 72 ಕೆರೆಗಳಿವೆ. ಮತ್ತು ಶಾಂತಿಸಾಗರ ಮತ್ತು ಇತರೆ ನೀರಿನ ಸಂಗ್ರಹವಾಗುವ 22 ಕೆರೆಗಳು ಜಲಸಂಪನ್ಮೂಲ ಇಲಾಖೆಗೆ ಬರಲಿದ್ದು ಉಳಿದಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳಾಗಿವೆ. ಈ ಕೆರೆಗಳ ಒತ್ತುವರಿಯನ್ನು ತೆರವು ಮಾಡಲೇಬೇಕು ಎಂದು ಹೇಳಿದರು.