SUDDIKSHANA KANNADA NEWS/ DAVANAGERE/ DATE:22-10-2024
ದಾವಣಗೆರೆ: ಹರಿಹರ ತಾಲ್ಲೂಕಿನಲ್ಲಿ 7,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕಜೋಳ ಕಟಾವಿಗೆ ಬಂದಿದ್ದು, ಈ ಪೈಕಿ 800 ಹೆಕ್ಟೇರ್ ಪ್ರದೇಶದಲ್ಲಿ ಕಟಾವು ಮಾಡಲಾಗಿದೆ. ಆದರೆ, ಉಳಿದ 6200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಕಟಾವು ಮಾಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಅತಿಯಾದ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತಿರುವುದು ಕಟಾವು ಮಾಡಲು ಅಡ್ಡಿಯಾಗಿದೆ. ಕೆಲವೆಡೆ ಜೋಳದ ತೆನೆಗಳು ನೆಲಕ್ಕುರುಳಿ ಮೊಳಕೆ ಬಂದಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗೆ ಹಳ್ಳಕೊಳ್ಳ ಹಾಗೂ ರಸ್ತೆ, ಚರಂಡಿಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಮಳೆಯ ನೀರು ತುಂಬಿ ಹರಿಯಿತು. ಕಳೆದೆರಡು ದಿನದಿಂದ ಬೆಳಿಗ್ಗೆಯೇ ಪ್ರಾರಂಭಗೊಂಡ ಜಡಿ ಮಳೆ ಎಡೆಬಿಡದೇ ಗಂಟೆಗಟ್ಟಲೇ ಸುರಿಯಿತು. ತಾಲ್ಲೂಕಿನ ನುಗ್ಗಿಹಳ್ಳಿ, ಕಾಕನೂರು, ದೇವರಹಳ್ಳಿ, ಗರಗ, ಗುಳ್ಳೇಹಳ್ಳಿ, ದಿಗ್ಗೇನಹಳ್ಳಿ, ನಲ್ಲೂರು, ಹಿರೇಉಡ, ನಾರಶೆಟ್ಟಿಹಳ್ಳಿ, ಹೊದಿಗೆರೆ, ಹಿರೇಮಳಲಿ, ಮಾವಿನಕಟ್ಟೆ, ಮಾಡಾಳ್, ಅಜ್ಜಿಹಳ್ಳಿ, ಚಿಕ್ಕೂಲಿಕೆರೆ, ಜೋಳದಹಾಳ್, ತಾವರೆಕೆರೆ, ಪಾಂಡೋಮಟ್ಟಿ,
ಗೊಪ್ಪೇನಹಳ್ಳಿ ಮುಂತಾದ ಗ್ರಾಮಗಳಲ್ಲಿ ಏಕ ಕಾಲದಲ್ಲಿ ಬಿರುಸಿನ ಮಳೆಯಾಗಿದೆ.
ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿರುವ ಹರಿದ್ರಾವತಿ ಹಳ್ಳ ಹಾಗೂ ಕಾಕನೂರು ಗ್ರಾಮದ ಬಳಿಯ ಹಿರೇಹಳ್ಳ ಮೈದುಂಬಿ ಹರಿಯತ್ತಿದೆ. ಈ ಹಳ್ಳಗಳ ನೀರುಸೂಳೆಕೆರೆಯ ಒಡಲನ್ನು ಸೇರಿಕೊಳ್ಳಲಿವೆ. ಅಡಿಕೆ ತೋಟಗಳಲ್ಲಿ ಮಳೆಯ
ನೀರು ನಿಂತಿದೆ.ನ್ಯಾಮತಿ ತಾಲೂಕಿನ ಸಾಸ್ವೆಹಳ್ಳಿ, ಹನುಮನಹಳ್ಳಿ, ಕುಳಗಟ್ಟೆ, ಸಾಸ್ವೆಹಳ್ಳಿ, ಬೈರನಹಳ್ಳಿ ಗ್ರಾಮಗಳ ಹಳ್ಳಗಳು ಮಳೆಯಿಂದಾಗಿ ಮೈದುಂಬಿ ಹರಿಯುತ್ತಿವೆ. ಕೆರೆಗಳು ಬಹುತೇಕ ತುಂಬುವ ಹಂತದಲ್ಲಿವೆ.
ಹರಿಹರದಲ್ಲಿ ಕುಸಿದ ಮನೆಗಳು:
ಹರಿಹರ ತಾಲೂಕಿನಲ್ಲಿ ವ್ಯಾಪಕ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು ಪಾಳ್ಯ ಗ್ರಾಮದಲ್ಲಿ ಮನೆಗಳು ಕುಸಿದಿವೆ. ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಹರಿಹರ ಮಾಜಿ ಶಾಸಕ ಎಸ್ .ರಾಮಪ್ಪ ಅವರು ಸಂತ್ರಸ್ತರಿಗೆ ಧೈರ್ಯ ತುಂಬಿದರು. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸೂಕ್ತ ಪರಿಹಾರ ನೀಡಲು ಸೂಚನೆ ನೀಡಿದರು.