SUDDIKSHANA KANNADA NEWS/ DAVANAGERE/ DATE:17-10-2023
ಬೆಂಗಳೂರು: ಭಾರತ ಸರ್ಕಾರ ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಿದ ಭಾರತೀಯ ನ್ಯಾಯ ಸಂಹಿತ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಹಾಗೂ ಭಾರತೀಯ ಸಾಕ್ಷ್ಯ ಮಸೂದೆ 2023 ಮಸೂದೆಗಳ ಕುರಿತು ಅಧ್ಯಯನ ಮಾಡಲು ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ತನ್ನ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಲ್ಲಿಸಿತು.
ಈ ಸುದ್ದಿಯನ್ನೂ ಓದಿ:
Siddaramaiah: ಆಡಳಿತದಲ್ಲಿ ಕನ್ನಡ ಪಾಲನೆಯಾಗ್ಲೇಬೇಕು, ಕರ್ನಾಟಕದಲ್ಲಿ ಕನ್ನಡ ಮಾತನಾಡುವ ವಾತಾವರಣ, ಅನಿವಾರ್ಯತೆ ಸೃಷ್ಟಿ ಅಗತ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ವರದಿಯ ಮುಖ್ಯಾಂಶಗಳ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಪರಿಶೀಲಿಸಿ, ಸರ್ಕಾರ ತನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವರಿಗೆ ತಿಳಿಸಲಿದೆ. ತಾವು ಗೃಹ ಸಚಿವರನ್ನು ಭೇಟಿಯಾಗುವ ಸಂದರ್ಭದಲ್ಲಿಯೂ ಈ ವಿಷಯ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ಪರಿಣತರ ಸಮಿತಿಯ ಸದಸ್ಯರು ತಮ್ಮ ಪರಿಶ್ರಮ, ಜ್ಞಾನ ಹಾಗೂ ಅನುಭವದ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಿರುವ ಕುರಿತು ಮುಖ್ಯಮಂತ್ರಿಗಳ ಸಮಿತಿಯನ್ನು ಅಭಿನಂದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ, ಸಮಿತಿಯು 10 ಸಭೆಗಳನ್ನು ನಡೆಸಿ, ಮೂರೂ ಮಸೂದೆಗಳ ಪ್ರತಿಯೊಂದು ಸೆಕ್ಷನ್ ಕುರಿತೂ ಸಹ ಸವಿವರವಾಗಿ ಅಧ್ಯಯನ ನಡೆಸಿ, ಚರ್ಚಿಸಿ, ವರದಿ ರೂಪಿಸಿದೆ ಎಂದು ತಿಳಿಸಿದರು.
ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಪಿ.ಎನ್. ದೇಸಾಯಿ, ಕಾನೂನು, ನ್ಯಾಯ ಮತ್ತು ಮಾನವಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಎಂ. ಹಿರೇಮಠ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಕಾರ್ಯದರ್ಶಿ ಶ್ರೀಧರ್ ಜಿ., ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ವಿಶೇಷ ಕಾರ್ಯದರ್ಶಿ ಹಾಗೂ ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕ ಹೆಚ್.ಕೆ. ಜಗದೀಶ್, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಪರ ಕಾರ್ಯದರ್ಶಿ ಶ್ರೀಮತಿ ಶೀಲಾ ಬಿ.ಎಂ., ನಿವೃತ್ತ ಪ್ರೊಫೆಸರ್ ಚಿದಾನಂದ ಪಾಟೀಲ, ವಕೀಲರಾದ ಶಶಿಕಾಂತ್ ಕರೋಶಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎನ್ಸ್. ಮೇಘರಿಖ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಪ್ರೊಫೆಸರ್ ಎಸ್.ವಿ. ಜೋಗರಾವ್, ಕಾನೂನು, ನ್ಯಾಯ ಮತ್ತು ಮಾನವಹಕ್ಕುಗಳ ಇಲಾಖೆಯ ನಿವೃತ್ತ ಅಪರ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಮೊದಲಾದವರು ಸಮಿತಿಯ ಸದಸ್ಯರಾಗಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಉಪಸ್ಥಿತರಿದ್ದರು.