SUDDIKSHANA KANNADA NEWS/ DAVANAGERE/ DATE:11-11-2024
ಚನ್ನಪಟ್ಟಣ: ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣುಮಕ್ಕಳ ಪರವಾಗಿ ಪಾಪ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.
ಚನ್ನಪಟ್ಟಣದ ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಾಸನದಲ್ಲಿ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ ಮೊಮ್ಮಗನ ವಿರುದ್ಧ ಯಾಕೆ ದೇವೇಗೌಡರು ಮಾತನಾಡಲಿಲ್ಲ. ಮಾಡಿದ ಪಾಪದ ಕೆಲಸಕ್ಕೆ, ನೊಂದ ಹೆಣ್ಣು ಮಕ್ಕಳ ಜೀವನ ನೆನಪಿಸಿಕೊಂಡು ಯಾಕೆ ಕಣ್ಣೀರು ಬರಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದೆ ಅಂತ ದೇವೇಗೌಡರಿಗೆ ಹೊಟ್ಟೆಯುರಿ. ಅದಕ್ಕೇ ನಮ್ಮ ಸರ್ಕಾರ ಕಿತ್ತಾಕುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದ ಜನತೆ ಆರಿಸಿರುವ ನಮ್ಮ ಸರ್ಕಾರವನ್ನು ಕುಮಾರಸ್ವಾಮಿ, ದೇವೇಗೌಡರಿಂದ ಕೀಳಲು ಸಾಧ್ಯವಿಲ್ಲ. ನಿಮ್ಮ ಹೊಟ್ಟೆಯುರಿ ನಿಮ್ಮನ್ನೇ ಸುಡತ್ತೆ ಹೊರತು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ದೇವೇಗೌಡರೇ ಎಂದರು.
ಮೊದಲ ಬಾರಿ ಸಿಎಂ ಆಗಿ ಹತ್ತು ಹಲವು ಭಾಗ್ಯಗಳನ್ನು ನೀಡಿದೆ. ಎರಡನೇ ಬಾರಿ ಸಿಎಂ ಆಗಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ನಮ್ಮ ಸಾಧನೆಯ ಸಾಕ್ಷಿ ರಾಜ್ಯದ ಜನತೆಯ ಎದುರಿಗೆ ಇಟ್ಟಿದ್ದೀವಿ. ನೀವು ಏನು ಸಾಧನೆ ಮಾಡಿದ್ದೀರಿ ಅಂತ ಚನ್ನಪಟ್ಟಣ ಜನತೆಯ ಎದುರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
400 ಕೋಟಿ ವೆಚ್ಚದ ಹಾಲಿನ ಪುಡಿ ಘಟಕ ಮಾಡಿದ್ದು ನಾವು. ಕನಕಪುರದಲ್ಲಿ 2016 ರಲ್ಲಿ ಡೈರಿ ಸಂಕೀರ್ಣವನ್ನು 700 ಕೋಟಿ ರೂ ವೆಚ್ಚದಲ್ಲಿ ಮಾಡಿದ್ದು ನಾವು. ಇಂಥವು ಇನ್ನೂ ಪಟ್ಟಿ ದೊಡ್ಡದಿದೆ. ಕುಮಾರಸ್ವಾಮಿ ಅವರು ಇಂಥಾ ಒಂದೇ ಒಂದನ್ನು ಮಾಡಿದ್ದಾರಾ ಹೇಳಿ ದೇವೇಗೌಡರೇ . ಇದನ್ನು ಚನ್ನಪಟ್ಟಣ ಜನತೆ ಕೂಡ ಕೇಳಬೇಕು ಎಂದು ಕರೆ ನೀಡಿದರು.