SUDDIKSHANA KANNADA NEWS/ DAVANAGERE/ DATE:20-08-2024
ದಾವಣಗೆರೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು ರೈತರ ಬದುಕು ಮೂರಾಬಟ್ಟೆಯಾಗಿದೆ. ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಟೊಮೊಟೊ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮತ್ತೆ ಕೆಲವೆಡೆ ಬೆಳೆ ಹಾನಿ ಸಂಭವಿಸಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಕುರುಬರಹಳ್ಳಿ ಗ್ರಾಮದಲ್ಲಿ ಕುಟುಂಬವೊಂದು ಆಸ್ಪತ್ರೆಗೆ ಸೇರಿದೆ. ಚಿಕಿತ್ಸೆಗೆ ಹಣಕ್ಕಾಗಿ ಪರದಾಡುತ್ತಿದೆ.
ಧಾರಾಕಾರ ಮಳೆಯಿಂದಾಗಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಚಿಕ್ಕಕುರುಬರಹಳ್ಳಿ ಗ್ರಾಮದಲ್ಲಿ ಮನೆ ಬಿದ್ದು ನಾಗಪ್ಪ (40) ಅವರ ಕಾಲು ಮುರಿದಿದೆ. ಆತನ ಪತ್ನಿ ಅಕ್ಷತಾ (30) ಅವರ ಕೈಗೆ ಗಾಯಗಳಾಗಿವೆ.
ನಾಗಪ್ಪ ಮತ್ತು ಅಕ್ಷತಾ ದಂಪತಿಯ 10 ವರ್ಷದ ಪುತ್ರಿಯ ಕೈ, ಕಾಲು ಮುರಿದು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜೆ.ಎಸ್.ಬಸವಂತಪ್ಪ ಅವರ ಆರೋಗ್ಯ ವಿಚಾರಿಸಿದರು.ಧಾರಾಕಾರ ಮಳೆ ಸುರಿದ ಕಾರಣ ಮನೆಯ ಗೋಡೆಯು ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆ
ಕುಸಿಯುತ್ತಿದ್ದಂತೆ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಗಾಯಗೊಂಡ ನಾಗಪ್ಪ, ಅಕ್ಷತಾ ಹಾಗೂ 10 ವರ್ಷದ ಬಾಲಕಿಯನ್ನು ಕೂಡಲೇ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು.
ಶಾಸಕ ಬಸವಂತಪ್ಪ ಅವರು, ಗಾಯಾಳುಗಳ ಆರೋಗ್ಯ ವಿಚಾರಿಸಿ ಜಿಲ್ಲಾ ಸರ್ಜನ್ ನಾಗೇಂದ್ರಪ್ಪ ಅವರನ್ನು ವಾರ್ಡ್ ಗೆ ಕರೆಸಿಕೊಂಡು ಸೂಕ್ತ ರೀತಿಯ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.