SUDDIKSHANA KANNADA NEWS/ DAVANAGERE/ DATE:06-03-2025
ಬೆಂಗಳೂರು: ಕೆಲವು ತಿಂಗಳ ಹಿಂದೆ ಪ್ರತಿ ಹಾಲಿನ ಪ್ಯಾಕೆಟ್ ದರ 2 ರೂಪಾಯಿ ಏರಿಕೆ ಮಾಡಿ ಗ್ರಾಹಕರ ಜೇಬಿನಿಂದ ಕಸಿದುಕೊಂಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಮತ್ತೆ ಹಾಲಿನ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಇದಕ್ಕೆ ರಾಜ್ಯದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದು ಹೇಳಿಸಿದ ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಆರು ತಿಂಗಳಿನಿಂದ ರೂ. 656.07 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ರೈತರ ಹೆಸರು ಹೇಳಿಕೊಂಡು ಹಾಲಿನ ದರ ಏರಿಕೆ ಮಾಡುವ ಸಿಎಂ ಸಿದ್ದರಾಮಯ್ಯ ಅವರೇ ಮೊದಲು ರೈತರಿಗೆ ನೀಡಬೇಕಾದ ಪ್ರೋತ್ಸಾಹಧನ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ.
ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಿ, ಬಾಕಿ ಪ್ರೋತ್ಸಾಹಧನ ಹಣವನ್ನು ಸರಿಯಾಗಿ ನೀಡದ ಕಾಂಗ್ರೆಸ್ ಸರ್ಕಾರ, ಇದೀಗ ರೈತರಿಗಾಗಿ ಹಾಲಿನ ದರ ಹೆಚ್ಚಿಸುವುದಾಗಿ ಹೇಳಿ ಕನ್ನಡಿಗರ ಕಿವಿ ಮೇಲೆ ಹೂವು ಇಡಲು ಮುಂದಾಗಿದೆ. ಹಾಲಿನ ದರ ಲೀಟರ್ಗೆ 10 ರೂ. ಹೆಚ್ಚಳ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ ಎಂದು ಕುಂಟು ನೆಪ ಹೇಳಿ ಹೆಚ್ಚಳಕ್ಕೆ ಮುಂದಾಗಿದೆ ಎಂದು ಬಿಜೆಪಿ ದೂರಿದೆ.
ಸೇವ್ ನಂದಿನಿ ಎನ್ನುತ್ತಾ ರಾಜಕೀಯ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್, ಇದೀಗ ಕನ್ನಡಿಗರ ಬದುಕನ್ನೇ ಬರ್ಬಾದ್ ಮಾಡಿದೆ. ಕರುನಾಡಿನ ಜನತೆಯನ್ನು ಬೆಲೆ ಏರಿಕೆಯ ಬಿಸಿಯಿಂದ ಉಳಿಸಬೇಕಿದೆ! ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಹತ್ತು ರೂಪಾಯಿ ಹೆಚ್ಚಳ ಮಾಡಲು ರೈತರೇ ಹೇಳಿದ್ದಾರೆ ಎನ್ನುವ ಸಚಿವರ ಮಾತಿಗೆ ಜನಸಾಮಾನ್ಯರೂ ವಿರೋಧ ವ್ಯಕ್ತಪಡಿಸಿದ್ದಾರೆ.