SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪ್ರಜ್ಞೆ ಮೂಡಿಸುವ ಹಾಗೂ ಜನರಲ್ಲಿ ಜಾಗೃತಿ ನೀಡುವಂಥ ಕೆಲಸ ಸ್ವಾಭಿಮಾನಿ ಬಳಗ ಮಾಡುತ್ತಿದೆ. ಜನಪರ ಕಾಳಜಿಯುಳ್ಳ, ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿದರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ನಾಯಕರು ಹಾಗೂ ಹರಿಹರದ ಕಾಂಗ್ರೆಸ್ ನಾಯಕರ ಬೆಂಬಲದಿಂದಲೇ ಕೆಲವರು ಕಾಂಗ್ರೆಸ್ ನವರು ಎಂದು ಹೇಳಿಕೊಂಡು ಬಂದು ಹಲ್ಲೆ ನಡೆಸುವ ಪ್ರಯತ್ನ ಮಾಡಿದರು. ದಬ್ಬಾಳಿಕೆ ಸಹಿಸುವ ಪ್ರಶ್ನೆಯೇ ಇಲ್ಲ. ಹೆದರುವುದೂ ಇಲ್ಲ ಎಂದು ಗುಡುಗಿದರು.
ಮಲೇಬೆನ್ನೂರಿನಲ್ಲಿ ಸಾರ್ವಜನಿಕ ಜನತಾ ಅದಾಲತ್ ಮುಗಿಸಿಕೊಂಡು ಹರಿಹರಕ್ಕೆ ಬಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ತೆರಳುತ್ತಿದ್ದ ವೇಳೆ ಕಾಂಗ್ರೆಸ್ ನವರೆಂದು ಹೇಳಿಕೊಂಡು ಬಂದವರು ಸ್ವಾಭಿಮಾನಿ ಬಳಗದ ಮುಖಂಡರು, ಬೆಂಬಲಿಗರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಹರಿಹರಕ್ಕೆ ಬರಲು ಅನುಮತಿ ಕೊಟ್ಟವರು ಯಾರು ಎಂದು ದರ್ಪದ ಮಾತನಾಡಿದರು. ಇದಕ್ಕೆ ನಾವೂ ಸರಿಯಾಗಿಯೇ ಉತ್ತರ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಮಲೇಬೆನ್ನೂರು ಪುರಸಭೆಯ ಮುಂದೆ ಪ್ರತಿಭಟನೆ ನಡೆಸಲು, ಮೈಕ್ ಅನುಮತಿ ಪಡೆದಿದ್ದೆವು. ಆದರೂ ಅಧಿಕಾರಿಗಳಿಗೆ ಪದೇ ಪದೇ ಕರೆ ತೊಂದರೆ ಕೊಟ್ಟಿದ್ದಾರೆ. ಮಾತನಾಡಲು ಅವಕಾಶ ನೀಡದಂತೆ ಪದೇ ಪದೇ ಮೈಕ್ ಆಫ್ ಮಾಡುವಂತೆ
ಆದಷ್ಟು ಬೇಗ ಪ್ರತಿಭಟನೆ ಮುಗಿಸುವಂತೆ ಕಿರಿಕಿರಿ ಮಾಡಿದರು. ನಾವೇನೂ ರಾಜಕಾರಣ ಮಾಡಲು ಹೋಗಿರಲಿಲ್ಲ. ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಲು ಹೋಗಿದ್ದೇವೆ ಎಂದು ಹೇಳಿದರು.
ತುಳಿಯುವ ಕೆಲಸ ಮಾಡಿದಷ್ಟು ನಾವೂ ಬೆಳೆಯುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದು, ಜನರು ಪ್ರೀತಿ ನೀಡಿದ್ದಾರೆ. ಆಗಲೂ ಭಯವಾಗಿತ್ತು. ಈಗಲೂ ವಿನಯ್ ಕುಮಾರ್ ಬಗ್ಗೆ ಭಯವಾಗಿರಬೇಕು. ಹಾಗಾಗಿಯೇ
ಈ ರೀತಿ ಮಾಡಿಸಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಸ್ವಾಭಿಮಾನಿ ಬಳಗವು ವಿನೂತನ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗುತ್ತಿದೆ. ಚಿಕ್ಕ ಬದಲಾವಣೆಗೆ ನಾಂದಿ ಹಾಡಿದ್ದೇವೆ. ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಮನೆ ಮನ ಎರಡನ್ನೂ ತಲುಪುತ್ತಿದೆ. ಶೈಕ್ಷಣಿಕ, ಸಾಮಾಜಿಕ,
ರಾಜಕೀಯ ಪ್ರಜ್ಞೆ ಮೂಡಿಸುವಂತ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯುತ್ತವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಶೆಟ್ಟರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರುಪಾಕ್ಷಪ್ಪ ಪಂಡಿತ್, ಅಹಿಂದ ಮುಖಂಡರಾದ ಎಸ್. ಎಂ. ಸಿದ್ದಲಿಂಗಪ್ಪ, ಮೊಹಮ್ಮದ್ ಸಾಧಿಕ್, ಎಸ್. ಚಂದ್ರಶೇಖರ್, ಐ. ಎಂ. ಗಿರೀಶ್ ಮತ್ತು ಅಜ್ಜಯ್ಯ ಹಾಜರಿದ್ದರು.