SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕೆ. ಬಿ. ಕೊಟ್ರೇಶ್ ಅವರು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಮೊದಲಿನಿಂದಲೂ ಸಿದ್ದೇಶ್ವರ ಇಲ್ಲವೇ ಅವರ ಕುಟುಂಬದವರಿಗೆ ಟಿಕೆಟ್ ನೀಡಿದರೆ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ನನಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೆ. ಈಗ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಘೋಷಿಸಿದ್ದು, ಸಂತಸ ತಂದಿದೆ. ಅವರ ಪರವಾಗಿ ಪ್ರಚಾರ ನಡೆಸಿ, ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ತುಂಬಾ ಪ್ರೀತಿ ನೀಡಿದ್ದಾರೆ. ಆರ್. ಎಸ್. ಎಸ್. ಮುಖಂಡರು, ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮದ ಜನರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನನಗೆ ಬೆಂಬಲ ಸೂಚಿಸಿದ್ದರು.
ನನ್ನ ಪರವಾಗಿ ಧ್ವನಿ ಎತ್ತಿದ್ದರು. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧನಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ. ಸಿದ್ದೇಶ್ವರ ಹಾಗೂ ಅವರ ಪುತ್ರ ಅನಿತ್ ಅವರೂ ಸಹ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರ ಪರ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಜೊತೆಯಲ್ಲಿ ನಿಂತು ಕೆಲಸ ನಿರ್ವಹಿಸುವುದಾಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯಾದ್ಯಂತ ಬಿಜೆಪಿ ಪರ ಅಲೆ ಇದೆ. ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ನೋಡಬೇಕೆಂಬ ಆಸೆ ಇದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲಿರುಳು ಕೆಲಸ ಮಾಡುವ
ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.