SUDDIKSHANA KANNADA NEWS/ DAVANAGERE/ DATE:27-02-2025
ದಾವಣಗೆರೆ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಶಿವಧ್ಯಾನ ಮಂದಿರದ ಆವರಣದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಹಾಗೂ ತಂಡದವರಿಂದ ನಡೆದ ಭಕ್ತಿ- ಮಂಜರಿ ಕಾರ್ಯಕ್ರಮ ಜನಮನಸೂರೆಗೊಂಡಿತು.
ಶಿವರಾತ್ರಿ ಹಿನ್ನೆಲೆಯಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿವಧ್ಯಾನ ಮಂದಿರಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.
ನಂತರ ಭಕ್ತಿ ಮಂಜರಿ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಗಾಯಕಿ ಅರ್ಚನಾ ಉಡುಪ ತಂಡದವರಿಗೆ ಸನ್ಮಾನಿಸಿ ಮಾತನಾಡಿದರು. ಸಂಗೀತದ ಮೂಲಕ ಅರ್ಥಪೂರ್ಣ ಮಹಾಶಿವರಾತ್ರಿ ಆಚರಣೆ ಇಲ್ಲಿ ನಡೆದಿದೆ.
ಸುಮಾರು ಮೂರುವರೆ ಗಂಟೆಗಳ ಕಾಲ ಭಕ್ತಿಗೀತೆಗಳ ಮೂಲಕ ಅರ್ಚನ ಉಡುಪ ಮತ್ತು ತಂಡದವರು ಭಕ್ತಿಯ ಗಾನಸುಧೆಯೊಂದಿಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡಿದ್ದಾರೆಂದು ಶ್ಲಾಘಿಸಿದರು.
ತಂಡದವರ ಅತ್ಯಂತ ಶ್ರದ್ಧೆ ಮತ್ತು ತನ್ಮಯತೆಯ ಗಾಯನ ದೈವಿಕ ಲೋಕದ ಅನುಭವ ನೀಡಿದೆ. ಶಿವಧ್ಯಾನ ಮಂದಿರದಲ್ಲಿ ಸಂಗೀತಲೋಕವೇ ಸೃಷ್ಟಿಯಾಗಿತ್ತು ಎಂದರು.
ಈ ವೇಳೆ ಆನಂದ ಪರಮಾನಂದ, ವರಕವಿ ದ.ರಾ ಬೇಂದ್ರೆಯವರ ಕುರುಡು ಕಾಂಚಾಣ, ಶಿವಶಿವ ಎಂದರೆ ಭಯವಿಲ್ಲ, ನೀಡು ಶಿವ ನೀಡದಿರೂ ಶಿವ ಹಾಗೂ ಸತ್ಯಂ ಶಿವಂ ಸುಂದರಂ ಸೇರಿದಂತೆ ಭಕ್ತಿಗೀತೆಗಳ ಗಾಯನ ಜರುಗಿತು.
ವಿಶೇಷವಾಗಿ ಬಾಪೂಜಿ ವಿದ್ಯಾ ಸಂಸ್ಥೆಯ ನಿರ್ದೇಶಕ ಸಂಪಣ್ಣ ಮುತಾಲಿಕ್ ಅವರು ಪ್ರಸ್ತುತ ಪಡಿಸಿದ ಜಾನಪದ ಸಂಗೀತ ಜನಮನಸೆಳೆಯಿತು. ಈ ಸಂದರ್ಭದಲ್ಲಿ ವೀರೇಶ್ ಪಾಟೀಲ್, ಸಂಪಣ್ಣ ಮುತಾಲಿಕ್ ಸೇರಿದಂತೆ ಅನೇಕರಿದ್ದರು.