SUDDIKSHANA KANNADA NEWS/ DAVANAGERE/ DATE:03-01-2025
ದಾವಣಗೆರೆ: ಸರ್ಕಾರಿ ಶಾಲೆಗಳು ಉಳಿಯದಿದ್ದರೆ, ಗ್ರಾಮೀಣ ಪ್ರದೇಶಗಳಿಗೆ ಅಭಿವೃದ್ಧಿ ತಲುಪದಿದ್ದರೆ ಸಂವಿಧಾನದ ಆಶಯಗಳಿಗೆ ವಿರುದ್ಧ ಹೋದಂತೆ. ಜೊತೆಗೆ ಮತಹಾಕಿದ ಮತದಾರರು ಹಾಗೂ ಜನರಿಗೆ ಜನಪ್ರತಿನಿಧಿಗಳು ದ್ರೋಹ ಮಾಡಿದಂತೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿ – ನ್ಯಾಮತಿ ತಾಲ್ಲೂಕುಗಳ ಹತ್ತು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನದಡಿ ಸವಳಂಗ, ಸೋಗಿಲು, ಫಲವನಹಳ್ಳಿ, ಕಂಚಿಗಾರನಹಳ್ಳಿ, ಗಂಜೀನಹಳ್ಳಿ, ಚಟ್ನಹಳ್ಳಿ-2, ನ್ಯಾಮತಿ, ದೊಡ್ಡೆತ್ತಿನಹಳ್ಳಿ, ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇಲ್ಲಿನ ಶಾಲೆಗಳಲ್ಲಿರುವಷ್ಟು ತೊಂದರೆ, ಸಮಸ್ಯೆಗಳು ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿವೆ. ಜನಪ್ರತಿನಿಧಿಗಳು ಆದಷ್ಟು ಬೇಗ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸಂವಿಧಾನ ಓದುವುದು, ಸಂವಿಧಾನ ಪುಸ್ತಕ ಕೈಯಲ್ಲಿಡಿದುಕೊಂಡು ಓಡಾಡುವುದು, ಕೇವಲ ಭಾಷಣದಲ್ಲಿ ಸಾಮಾಜಿಕ ನ್ಯಾಯ ನೀಡುತ್ತೇವೆ ಎಂಬ ಮಾತು ಆಡುವುದು ಬೂಟಾಟಿಕೆ ಎಂದೆನಿಸುತ್ತದೆ. ಜನಪರ ಕೆಲಸ ಮಾಡುವ, ಶೈಕ್ಷಣಿಕ ಅಸಮಾನತೆ ತೊಲಗಿಸುವ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ಅವರ ಸ್ವಂತ ಕೆಲಸಗಳಲ್ಲಿ ನಿರತರಾಗಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಎಳ್ಳ,ಷ್ಟು ಕಾಳಜಿ ತೋರಿಸುತ್ತಿಲ್ಲ ಎಂಬುದು ಈ ಶಾಲೆಗಳನ್ನು ನೋಡಿದರೆ ಗೊತ್ತಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು ಭೇಟಿ ನೀಡಿದ ಬಹುತೇಕ ಶಾಲೆಗಳಲ್ಲಿನ ಸಮಸ್ಯೆಗಳನ್ನು ಹೇಳುತ್ತಾ ಹೋದರೆ ಸಾಕಾಗದು. ಕೊಠಡಿಗಳಿದ್ದರೆ ವಿದ್ಯಾರ್ಥಿಗಳಿಲ್ಲ. ವಿದ್ಯಾರ್ಥಿಗಳಿದ್ದರೆ ಕೊಠಡಿಗಳೇ ಇಲ್ಲ. ಡೆಸ್ಕ್, ಗ್ರಂಥಾಲಯ, ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಬಿಇಒ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಈ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಆರಿಸಿ ಹೋಗಿರುವ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹೆಚ್ಚಿನ ಅನುದಾನ ತಂದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನದಡಿ ಕಳೆದ ತಿಂಗಳು ಹದಿನಾಲ್ಕು ಶಾಲೆಗಳಿಗೆ ಭೇಟಿ ನೀಡಲಾಗಿತ್ತು. ಇಂದು ಹತ್ತು ಶಾಲೆಗಳಿಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಶಾಲೆಗಳ ಸ್ಥಿತಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಇಂದಿನ ದಿನಗಳಲ್ಲಿ ಇಷ್ಟು ಕನಿಷ್ಠ ಶಿಕ್ಷಣ ಮಕ್ಕಳಿಗೆ ಸಿಗುತ್ತಿದೆ ಎಂದು ಬೇಸರವಾಗುತ್ತಿದೆ. ನಮ್ಮ ಕೈಯಲ್ಲಾದಷ್ಟು ಮುಂಬರುವ ದಿನಗಳಲ್ಲಿ ಸಹಾಯ ಮಾಡುತ್ತೇವೆ. ದೊಡ್ಡ ದೊಡ್ಡ ಕಂಪೆನಿಗಳಿಗೆ ದೇಣಿಗೆ ಸಿಗಬಹುದಾ ಎಂಬ ಕುರಿತಂತೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಇದಕ್ಕೆ ಕಾಯುತ್ತಾ ಕುಳಿತುಕೊಳ್ಳದೇ ಜನಪ್ರತಿನಿಧಿಗಳು ಆದಷ್ಟು ಬೇಗ ಉನ್ನತೀಕರಣಗೊಳಿಸಬೇಕು ಎಂದರು.
ಗಂಜಿನಹಳ್ಳಿ ಗ್ರಾಮದಲ್ಲಿ 1150 ಮಕ್ಕಳು ಇದ್ದು, ಬೇರೆಡೆ ಓದಲು ಹೋಗುತ್ತಿದ್ದಾರೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದರೂ ವಿದ್ಯಾರ್ಥಿಗಳು ಇರುವುದು ನಾಲ್ವರು ಮಾತ್ರ. ಗ್ರಂಥಾಲಯ ಕಟ್ಟಡ ಪಾಳು ಬಿದ್ದಿದೆ. ಕಟ್ಟಡವೇ ಇಲ್ಲವೆಂದ ಮೇಲೆ ಪುಸ್ತಕಗಳು ಇರಲು ಸಾಧ್ಯವೇ? ಸರ್ಕಾರಿ ಶಾಲೆಗಳು ಸಾಯುತ್ತಿವೆ ಎಂದರೆ ಮುಂಬರುವ ದಿನಗಳಲ್ಲಿ ಊರುಗಳೇ ಜೀವ ಬಿಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ ಎಂದ ಅವರು, ಚಟ್ನಹಳ್ಳಿಯಲ್ಲಿ ಈ ಹಿಂದೆ 170 ಮಕ್ಕಳಿದ್ದ ಶಾಲೆಯಲ್ಲಿ ಏಳು ಶಿಕ್ಷಕರು ಇದ್ದರು. ಆದ್ರೆ. ಇಂದು ನಾಲ್ಕು ಮಕ್ಕಳಿದ್ದು, ಇರೋದು ಒಬ್ಬರು ಶಿಕ್ಷಕರು ಮಾತ್ರ. ಇದು ಸಾಮಾಜಿಕ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮುನ್ನ ಜಿಲ್ಲೆಯಾದ್ಯಂತ ಓಡಾಡಿದೆ. 650 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದೇನೆ. ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಹಳ್ಳಿ ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಆದ್ರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಮೇಲೆ ಹೇಗೆ ಚುನಾವಣೆ ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ. ಆದರೂ ಜನರು ಪ್ರೀತಿ, ವಿಶ್ವಾಸ ತೋರಿದರು. ಕರ್ನಾಟಕದ ರಾಜ್ಯದಲ್ಲಿ ಯಾವೊಬ್ಬ ಪಕ್ಷೇತರ ಅಭ್ಯರ್ಥಿ ಪಡೆಯದಷ್ಟು ಮತಗಳನ್ನು ನಾನು ಪಡೆದೆ. ಇದಕ್ಕೆ ನಾನು ಎಂದಿಗೂ ಜನರಿಗೆ ಚಿರಋಣಿಯಾಗಿರುತ್ತೇನೆ.
ಶೈಕ್ಷಣಿಕ ಕ್ಷೇತ್ರದಲ್ಲಿನ ಅಸಮಾನತೆ ತೊಲಗಿಸಬೇಕೆಂಬ ಕನಸು ಕಂಡಿದ್ದೇನೆ. ಕೇವಲ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು. ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಸ್ವಾಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ, ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ಉಪಾಧ್ಯಕ್ಷ ಶಿವಕುಮಾರ್ ಶೆಟ್ಟಿ, ರಾಜ್ಯ ಸಂಚಾಲಕ ಅಯ್ಯಣ್ಣ ಮುಲ್ಕಲ್, ಶಿವಕುಮಾರ್ ಸಂಬಳಿ, ಹೊನ್ನಾಳಿ ಯುವ ಮುಖಂಡ ಸುದೀಪ್, ರಾಜು ಕನಗಣ್ಣನವರ್ ಮತ್ತಿತರರು ಹಾಜರಿದ್ದರು. ಚಟ್ನಹಳ್ಳಿ, ಗಂಜಿನಹಳ್ಳಿ ಸೇರಿದಂತೆ ಎಲ್ಲಾ ಶಾಲೆಗಳಲ್ಲಿನ ಶಿಕ್ಷಕರು, ಮುಖ್ಯಶಿಕ್ಷಕರು ಶಾಲೆಗೆ ಭೇಟಿ ನೀಡಿದ ಜಿ. ಬಿ. ವಿನಯ್ ಕುಮಾರ್ ಅವರನ್ನು ಸನ್ಮಾನಿಸಿದರು. ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಮೂಲಕ ಬಡ ಮಕ್ಕಳಿಗೂ ಉನ್ನತ ಹುದ್ದೆ ಸಿಗುವಂತೆ ಮಾಡಲು ರಿಯಾಯಿತಿ ಹಾಗೂ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ಕ್ರಾಂತಿಕಾರಕ ಬೆಳವಣಿಗೆ ಎಂದು ಬಣ್ಣಿಸಿದರು. ಮಕ್ಕಳ ಜೊತೆಗೆ ವಿನಯ್ ಕುಮಾರ್ ಅವರು ಸಂವಾದ ನಡೆಸಿದರು. ಸಮಸ್ಯೆಗಳ ಬಗ್ಗೆ ಆಲಿಸಿದರು.
ಬಿಸಿಯೂಟ ಸವಿದ ಜಿಬಿವಿ
ಜಿ. ಬಿ. ವಿನಯ್ ಕುಮಾರ್ ಅವರು ಸರ್ಕಾರಿ ಶಾಲೆಯಲ್ಲಿಯೇ ಬಿಸಿಯೂಟ ಸವಿದರು. ಮಕ್ಕಳ ಜೊತೆ ಸಾಲಿನಲ್ಲಿ ಕುಳಿತು ಊಟ ಮಾಡಿ ಮಕ್ಕಳು, ಶಿಕ್ಷಕರ ಪ್ರೀತಿಗೆ ಪಾತ್ರರಾದರು. ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟದ ಗುಣಮಟ್ಟದ ಬಗ್ಗೆಯೂ ಮಾಹಿತಿ ಪಡೆದುಕೊಂಡರು.