SUDDIKSHANA KANNADA NEWS/ DAVANAGERE/ DATE:21-08-2024
ದಾವಣಗೆರೆ: ತಾಲೂಕಿನ ಕುರ್ಕಿ ಗ್ರಾಮದ ಬಳಿ ಕುಸಿದಿದ್ದ ಭದ್ರಾ ಕಾಲುವೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮದಿಂದ 4.50 ಕೋಟಿ ರೂ. ಹಣವನ್ನು ತುರ್ತು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.
ಮಂಗಳವಾರ ಕಾಲುವೆಯ ಸೇತುವೆ ಕುಸಿದು ಬಿದ್ದು, ಜಮೀನುಗಳಿಗೆ ರೈತರು ಓಡಾಡುವುದಕ್ಕೆ, ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು. ಅಲ್ಲದೇ, ಸೇತುವೆ ಕುಸಿದ ಪರಿಣಾಮ ಹರಿಹರ-ಹರಪನಹಳ್ಳಿ ತಾಲೂಕಿಗೆ ನೀರಿನ ಸಂಪರ್ಕ ಕಲ್ಪಿಸುವ ಜಂಕ್ಷನ್ ಗೇಟ್ ಇಲ್ಲೇ ಇರುವುದರಿಂದ ಈ ಎರಡು ತಾಲೂಕಿಗೆ ಅತೀ ಹೆಚ್ಚು ನೀರು ಹರಿದು ಈ ಭಾಗದ ರೈತರಿಗೆ ನೀರಿನ ಕೊರತೆ ಎದುರಾಗುತ್ತಿತ್ತು.
ಈ ನಿಟ್ಟಿನಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ಸೇತುವೆ ಕುಸಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತುರ್ತು ಸೇತುವೆ ನಿರ್ಮಾಣಕ್ಕೆ ಹಣದ ಅವಶ್ಯಕತೆ ಇದ್ದು, ಕೂಡಲೇ ಹಣ ಬಿಡುಗಡೆಗೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದರು.
ಶಾಸಕರ ಮನವಿಗೆ ಸ್ಪಂದಿಸಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಂಗಳವಾರ ಸಂಜೆಯೇ ಸೇತುವೆ ನಿರ್ಮಾಣಕ್ಕೆ 4.50 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಈಚೆಗೆ ಕಬ್ಬೂರು ಗ್ರಾಮದ ಬಳಿ ಭದ್ರಾ ಕಾಲುವೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹಳ್ಳದ ಬಳಿಯಿರುವ ಸೇತುವೆ ಕಿತ್ತುಕೊಂಡು ಹೋಗಿತ್ತು. ಈ ಸೇತುವೆ ನಿರ್ಮಾಣಕ್ಕೂ 4.50 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಒಟ್ಟು ಎರಡು ಸೇತುವೆ ನಿರ್ಮಾಣಕ್ಕೆ 9 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.