SUDDIKSHANA KANNADA NEWS/ DAVANAGERE/ DATE:26-02-2025
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 1 ರಿಂದ 20ರ ವರೆಗೆ ಹಾಗೂ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 21 ರಿಂದ 4ರ ವರೆಗೆ ನಡೆಯಲಿದೆ.
ಈ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಕ್ತಿ ಯೋಜನೆಯಡಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 400 ಕೋಟಿ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಶಿಕ್ಷಣ, ಉದ್ಯೋಗ ಮುಂತಾದ ಉದ್ದೇಶಗಳಿಗಾಗಿ ನಿತ್ಯ ಪ್ರಯಾಣ ಬೆಳೆಸುವ ಹೆಣ್ಣುಮಕ್ಕಳಿಗೆ ಈ ಯೋಜನೆ ವರದಾನವಾಗಿದೆ ಎಂದು ಹೇಳಿದ್ದಾರೆ.
ಯೋಜನೆ ಜಾರಿಯಾದ ನಂತರದ ಅವಧಿಯಲ್ಲಿ ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲಾ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಕುಟುಂಬ ನಿರ್ವಹಣೆಗಾಗಿ ದುಡಿಮೆಗೆ ತೆರಳುವ ಮಹಿಳೆಯರು, ತನ್ನ ಮತ್ತು ತನ್ನವರ ವೈದ್ಯಕೀಯ ಚಿಕಿತ್ಸೆಯ ಉದ್ದೇಶಕ್ಕಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವ ತಾಯಂದಿರ ಮುಖದಲ್ಲಿ ಮಂದಹಾಸ ಕಂಡಿದ್ದೇನೆ. ಯೋಜನೆಯೊಂದು ನಮ್ಮ ನಿರೀಕ್ಷೆಗೂ ಮೀರಿ ಅರ್ಹರನ್ನು ತಲುಪಿದಾಗ ಮೂಡುವ ಸಾರ್ಥಕ್ಯದ ಭಾವ ಈಗ ನನ್ನದಾಗಿದೆ ಎಂದು ಹೇಳಿದ್ದಾರೆ.