SUDDIKSHANA KANNADA NEWS/ DAVANAGERE/ DATE-08-06-2025
ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ. ಹೆಗ್ಗಳಿಕೆಗೆ ಅಷ್ಟೇ ಎಂಬಂತಾಗಿದೆ. ಜನರು ಎದುರಿಸುತ್ತಿರುವ ಸಮಸ್ಯೆಗಳು ಒಂದರೆಡಲ್ಲ. ಅಲ್ಲಲ್ಲಿ ಗುಂಡಿ ಅಗೆಯುವುದು, ಗುಂಡಿ ಮುಚ್ಚುವುದು ಕಾಮನ್. ಕೇಳಿದರೆ ಸ್ಮಾರ್ಟ್ ಸಿಟಿ ಕೆಲಸ ಎಂಬ ಸಬೂಬು ಬಂದೇ ಬರುತ್ತದೆ,
ಆದ್ರೆ, ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದಿರುವ ದಾವಣಗೆರೆಯ ಪಿ ಬಿ ರಸ್ತೆ ರೇಣುಕಾಮಂದಿರ ಅಂಡರ್ ಪಾಸ್ ಬಳಿ ಇರುವ ಒಳಚರಂಡಿ ಚೇಂಬರ್ ಗೆ ಹೋಲ್ ಮಾಡಲಾಗಿದ್ದು, ಇದರಿಂದ ನೀರು ಸರಾಗವಾಗಿ ಹರಿಯದೇ ಜನರು ಸಮಸ್ಯೆ ಎದುರಿಸುವಂತಾಗಿದೆ.
ಮಲೀನ ನೀರು ನಿಂತಲ್ಲೇ ನಿಲ್ಲುವುದರಿಂದ ಜನರು ಎದುರಿಸುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ಸ್ಮಾರ್ಟ್ ಸಿಟಿ ದಾವಣಗೆರೆ ನಗರದ ಮಧ್ಯ ಭಾಗದಲ್ಲಿ ಇರುವ ಹಳೆಯ ಭಾಗಕ್ಕೆ ಹೋಗುವ ರೇಣುಕಾ ಮಂದಿರ ಅಂಡರ್ ಪಾಸ್ ನ ಬಳಿ ಇರುವ ಒಳ ಚರಂಡಿ ಛೇಂಬರ್ ಗೆ ಹೋಲು ಮಾಡಿರುವವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಹರಿಯುತ್ತಿರುವ ನೀರಿನಲ್ಲಿ ಪನ್ನೀರ್ ಪೀಸ್ ಗಳು ಕಂಡು ಬರುತ್ತವೆ. .ಮುಚ್ಚಿದ ಮ್ಯಾನ್ ಹೋಲ್ ಇದ್ದರೂ ಸಹ ಮಲೀನ ನೀರಿನ ವಾಸನೆಯಿಂದ ಜನರು ಹೈರಾಣಾಗಿದ್ದಾರೆ. ಈ ಭಾಗದಲ್ಲಿ ಗಬ್ಬು ವಾಸನೆ ಹೆಚ್ಚಾಗಿದೆ. ರೇಣುಕಾ ಮಂದಿರದ ಅಂಡರ್ ಪಾಸ್ ಬಳಿ ಹೆಚ್ಚಾಗಿ ಶಾಲಾ ಮಕ್ಕಳು ಸಂಚರಿಸುತ್ತಾರೆ. ಸೊಳ್ಳೆಯೂ ಜಾಸ್ತಿಯಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ.
ತಳ್ಳು ಗಾಡಿಯವರು, ಸೊಪ್ಪು ಮಾರಾಟ ಮಾಡುವವರು, ವಾಣಿಜ್ಯ ಕಸ, ಮನೆ ಕಸವನ್ನೂ ತಂದು ಇಲ್ಲೇ ಹಾಕುತ್ತಾರೆ. ಬೆಳಕಿನ ವ್ಯವಸ್ಥೆ ಹಾಗೂ ಸಿ ಸಿ ಕ್ಯಾಮರ ವ್ಯವಸ್ಥೆ ಇಲ್ಲಿ ಮರಿಚೀಕೆಯಾಗಿದೆ. ಇದರಿಂದಾಗಿ ಇಲ್ಲಿ ನಿರ್ಭೀತಿಯಿಂದ ಜನರು ಕಸ ಬಿಸಾಡಿ ಹೋಗುತ್ತಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಬಂಧಪಟ್ಟವರು ಕೂಡಲೇ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವಂತೆ ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಒತ್ತಾಯಿಸಿದ್ದಾರೆ.