SUDDIKSHANA KANNADA NEWS/ DAVANAGERE/ DATE:28-02-2025
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಅಸುರಕ್ಷಿತ ಆಹಾರ ಪದಾರ್ಥಗಳ ಸೇವೆನೆಯಿಂದ ಮಾನವರ ಆರೋಗ್ಯದಲ್ಲಿ ವ್ಯತ್ತಿರಿಕ್ತ ಪರಿಣಾಮಗಳು ಉಂಟಾಗುವ ಹಾಗೂ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಹೊಲದಿಂದ ತಟ್ಟಿಯವರೆಗೆ ಸುರಕ್ಷಿತ ಆಹಾರ ಎಂಬ ಕಲ್ಪನೆಯೊಂದಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಪ್ರಾಧಿಕಾರವು ಕರ್ತವ್ಯ ನಿರ್ವಹಿಸುತ್ತಿದೆ.
ಕೆಲವು ಆಹಾರ ಪದಾರ್ಥ ವ್ಯಾಪಾರಸ್ಥರು ಇಡ್ಲಿ ಹಾಗೂ ಇತರೇ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿದ್ದು ಆಹಾರ ತಯಾರಿಕೆಯ ವೇಳೆಯಲ್ಲಿ ರಾಸಾಯನಿಕಗಳು ಬಿಡುಗಡೆಯಾಗುವುದರಿಂದ ಇದು ಕ್ಯಾನ್ಸರ್ ನಂತಹ ಮಾರಕರೋಗಗಳಿಗೆ ಕಾರಣವಾಗುತ್ತದೆ ಹಾಗೂ ಸಿಹಿತಿಂಡಿ ಮತ್ತು ಕೇಕ್, ಬಜ್ಜಿ, ಬೋಂಡಗಳಂತಹ ಸಿದ್ದಪಡಿಸಿದ ಆಹಾರ ಪದಾರ್ಥಗಳನ್ನು ಮುದ್ರಿತ ಪೇಪರ್ ಗಳಲ್ಲಿ ಪೊಟ್ಟಣಕಟ್ಟಿ ಮಾರಾಟ ಮಾಡುವುದರಿಂದ ಮುದ್ರಣಕ್ಕೆ ಬಳಕೆ ಮಾಡುವ ಶಾಹಿ (ಮಸಿ, ಇಂಕ್) ಆಹಾರ ಪದಾರ್ಥದೊಂದಿಗೆ ಸೇರಿ ಇದರಿಂದಲೂ ಕ್ಯಾನ್ಸರ್ ಉಂಟಾಗುವ ಸಂಭವವಿರುತ್ತದೆ
ಆದ್ದರಿಂದ ಎಲ್ಲಾ ಸಿದ್ಧಪಡಿಸಿದ ಆಹಾರ ತಯಾರಕರು, ಮಾರಾಟಗಾರರು ಈ ಅಂಶವನ್ನು ಗಮನದಲ್ಲಿಟುಕೊಂಡು ಆಹಾರ ಪದಾರ್ಥ ತಯಾರಿಕೆಗೆ ಪ್ಲಾಸ್ಟಿಕ್ ಬಳಸದಂತೆ ಮತ್ತು ತಯಾರಾದ ಆಹಾರ ಪದಾರ್ಥಗಳನ್ನು ಮುದ್ರಿತ ಹಾಳೆಯಲ್ಲಿ ಪೊಟ್ಟಣವನ್ನು ಕಟ್ಟಿ ಮಾರಾಟಮಾಡದಂತೆ ಸೂಚಿಸಿದೆ.
ಇಲಾಖೆಯಡಿ ನಿರಂತರವಾದ ತಪಾಸಣೆ ನಡೆಯುತ್ತಿದ್ದು, ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ ಮಾಡುವ ಎಲ್ಲಾ ಆಹಾರ ಪದಾರ್ಥ ವ್ಯಾಪಾರಸ್ಥರಿಗೆ ದಂಡವನ್ನು ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.