SUDDIKSHANA KANNADA NEWS/ DAVANAGERE/ DATE:11-04-2025
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಆಡಿದ ಮಾತುಗಳ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಉದ್ರೇಕಿಸುವ, ಪ್ರಚೋದಿಸುವ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತ ಮಾತುಗಳನ್ನು ಆಡಿರುವುದು ರಾಜ್ಯ ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ.
ಮೂರು ನಿಮಿಷ 28 ಸೆಕೆಂಡ್ ವಿಡಿಯೋ ಮಾಡಿ ಹರಿಬಿಡಲಾಗಿದ್ದು, ಈ ವಿಡಿಯೋದಲ್ಲಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಅಹ್ಮದ್ ಕಬೀರ್ ಅಲಿಯಾಸ್ ಅಹ್ಮದ್ ಖಾನ್ ಎಂಬಾತನೇ ಇಂಥ ಮಾತುಗಳನ್ನು ಆಡಿರುವುದು.
ಕೋಮುಪ್ರಚೋದಕ, ಯುವಕರ ಮನಸ್ಸು ಕೆಡಿಸುವಂಥ ಮಾತುಗಳೇ ಹೆಚ್ಚಾಗಿವೆ. ಇದು ಕೇಸರಕಲಿಗಳನ್ನು ಕೆರಳಿ ಕೆಂಡವಾಗಿಸಿದೆ.
ವಿಡಿಯೋದಲ್ಲಿ ಆಡಿರುವ ಮಾತುಗಳೇನು…?
ವಕ್ಫ್ ಮಸೂದೆ ತಿದ್ದುಪಡಿ ಒಪ್ಪಲು ಸಾಧ್ಯವಿಲ್ಲ. ಕೇವಲ ಪ್ರತಿಭಟನೆ ನಡೆಸಿದರೆ, ಬ್ಯಾನರ್ ಹಿಡಿದು ಓಡಾಡಿದರೆ ಏನೂ ಆಗಲ್ಲ. ಸಿಎಂ, ಡಿಸಿಎಂ, ಡಿಸಿಗೆ ಮನವಿ ಕೊಟ್ಟರೆ ಬೇಡಿಕೆ ಈಡೇರಲ್ಲ. ಎಲ್ಲರೂ ರಸ್ತೆಗೆ ಇಳಿಯಬೇಕು. ಏನ್ ಬೇಕಾದರೂ
ಮಾಡಿ. ಬೆಂಕಿ ಇಡಿ, ಸಾಯಿರಿ. ಜೀವ ಬಲಿ ಕೊಡಬೇಕು ಎಂದು ಹೇಳಿದ್ದಾನೆ.
ಗ್ರಾಮದಲ್ಲಿ 10ರಿಂದ 15 ಜನ ಸಾಯಬೇಕು. ತಲೆಹೊಡೆಯೋ ಕೆಲಸ ಮಾಡಬೇಕು. ಬಸ್ ಗೆ, ರೈಲಿಗೆ ಬೆಂಕಿ ಇಡಬೇಕು. ಕೆಲವನ್ನು ಹೇಳದೆಯೇ ಮಾಡಬೇಕು. ಯೋಜನೆ ರೂಪಿಸಿ ಮಾಡುವುದಲ್ಲ. ಊರಿನ ಪ್ರಮುಖರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ಭಾರತದಲ್ಲಿ ನಮಗೆ ಯಾವ ನಾಯಕ ಇಲ್ಲ. ನಾಯಕನೆಂದುಕೊಂಡಿದ್ದರೂ ಒಪ್ಪಲು ಆಗುತ್ತಿಲ್ಲ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಬಂದ್ ಮಾಡಿ, ಬೆಂಕಿ ಇಡಿ, ಒಡೆದು ಹಾಕಿ, ಮುರಿದು ಹಾಕಿ. ಏನೇ ಆದರೂ
ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸಮಯಕ್ಕೆ ದೊಡ್ಡವರು ಬೆಂಬಲವಾಗಿ ನಿಲ್ತಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದಾನೆ.
ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.