SUDDIKSHANA KANNADA NEWS/ DAVANAGERE/ DATE:03-03-2025
ದಾವಣಗೆರೆ: ಪವಿತ್ರ ರಂಜಾನ್ ಹಬ್ಬದ ವೇಳೆ ಮುಸ್ಲಿಂ ಬಾಂಧವರು ಕಟ್ಟುನಿಟ್ಟಿನ ಉಪವಾಸ ವ್ರತ ಕೈಗೊಳ್ಳುತ್ತಾರೆ. ಆದ್ರೆ, ದಾವಣಗೆರೆಯ ಐದು ವರ್ಷದ ಪೋರಿ ಉಪವಾಸ ವ್ರತ ಆಚರಿಸುವ ಮೂಲಕ ಈಗ ಎಲ್ಲರ ಗಮನ ಸೆಳೆದಿದ್ದಾಳೆ.
ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಪುತ್ರಿ, ಐದು ವರ್ಷದ ಬಾಲೆ ಸೈಯದಾ ದನೀನ್ ಮರಿಯಮ್ ಉಪವಾಸ ವ್ರತ ಮಾಡುವ ಮೂಲಕ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಈಕೆ ಕಾಂಗ್ರೆಸ್ ಮುಖಂಡ ಸೈಯದ್ ಸೈಫುಲ್ಲಾ ಅವರ ಮೊಮ್ಮಗಳು.
ಬೆಳಿಗ್ಗೆಯೇ ಎದ್ದು ಮನೆಯವರ ಜೊತೆ ಪ್ರಾರ್ಥನೆ ಸಲ್ಲಿಸುತ್ತಾಳೆ. ಪುತ್ರಿಗೆ ಆರಂಭದಲ್ಲಿ ಮನೆಯವರು ಬೇಡ ಎಂದರೂ ಆಕೆ ಮಾತ್ರ ನಾನು ಉಪವಾಸ ವ್ರತ ಆಚರಿಸುತ್ತೇನೆ ಎಂದಳು. ಚಾಕೂಲೇಟ್ ನೀಡಿದರೂ ಸೇವಿಸದೇ ಕಠಿಣ ವ್ರತ ಆಚರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ.
ಮಗಳ ಉಪವಾಸ ಕಂಡು ಮನೆಯವರು, ಕುಟುಂಬಸ್ಥರು ಹೆಮ್ಮೆ ಪಡುತ್ತಿದ್ದಾರೆ. ಮೊಮ್ಮಗಳ ಕಠಿಣ ಉಪವಾಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ನಮಗೂ ಖುಷಿ ತಂದಿದೆ. ದೊಡ್ಡವರೇ ಉಪವಾಸ ಮಾಡುವುದು ಅಷ್ಟು ಸುಲಭವಲ್ಲ. ಕೇವಲ ಐದು ವರ್ಷಕ್ಕೆ ಬೆಳಿಗ್ಗೆಯೇ ಬೇಗನೇ ಎದ್ದು ಮನೆಯವರೊಟ್ಟಿಗೆ ಪ್ರಾರ್ಥನೆ ಸಲ್ಲಿಸಿ, ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸ ಇರುತ್ತಾಳೆ. ಇದು ನಮಗೂ ಸಂತೋಷ ತಂದಿದೆ. ಅಕ್ಕಪಕ್ಕದವರೂ ಹೆಮ್ಮೆ ಪಡುತ್ತಿದ್ದಾರೆ ಎಂದು ಸೈಯದ್ ಸೈಫುಲ್ಲಾ ಅವರು ಹೇಳಿದ್ದಾರೆ.
ಮಗಳ ಬಗ್ಗೆ ನನಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಹೆಮ್ಮೆಯ ವಿಚಾರ. ಬಡಾವಣೆಯ ಜನರೂ ಹೆಮ್ಮೆಪಡುತ್ತಿರುವುದು ನಮಗೂ ಸಂತೋಷ ತಂದಿದೆ. ರಂಜಾನ್ ಉಪವಾಸಗಳನ್ನು ಮುಸ್ಲಿಂ ಧರ್ಮದ ಅನುಯಾಯಿಗಳು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ದ್ರವ ಅಥವಾ ಘನ ಆಹಾರ ಸೇವನೆ ಮಾಡದೇ ಉಪವಾಸವಿದ್ದು, ಕಠಿಣ ವ್ರತ ಕೈಗೊಳ್ಳುತ್ತಾರೆ. ಐದು ವರ್ಷದ ಪುತ್ರಿಯ ಈ ಕೈಂಕರ್ಯಕ್ಕೆ ಎಲ್ಲರೂ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ ಎಂದು ಸೈಯದ್ ಖಾಲಿದ್ ಅಹ್ಮದ್ ತಿಳಿಸಿದ್ದಾರೆ.