SUDDIKSHANA KANNADA NEWS/ DAVANAGERE/ DATE:28-03-2025
ದಾವಣಗೆರೆ: ನ್ಯಾಮತಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ 22 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕಳವು ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವಿಜಯಕುಮಾರ್, ಅಜಯ್ ಕುಮಾರ್, ಹೊನ್ನಾಳಿಯ ಅಭಿಷೇಕ್, ಚಂದ್ರಶೇಖರ್ ಹಾಗೂ ನ್ಯಾಮತಿಯ ಮಂಜುನಾಥ್ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣ ಸಾಕಷ್ಟು ಸಂಚಲನ ಮೂಡಿಸಿತ್ತು. ಪೊಲೀಸರಿಗೆ ಸವಾಲಿನಿಂದ ಕೂಡಿತ್ತು. ನ್ಯಾಮತಿ ಪಟ್ಟಣದಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಕಳವು ಪ್ರಕರಣದಲ್ಲಿ ಸ್ಥಳೀಯರ ಕೈವಾಡ ಎಂಬ ಸುಳಿವು ದೊರೆತಿತ್ತು. ಆದ್ರೆ, ಆರೋಪಿಗಳ ಚಾಣಾಕ್ಷ ನಡೆ ಪೊಲೀಸರಿಗೆ ಸವಾಲು ತಂದಿತ್ತು.
ತಲೆಮರೆಸಿಕೊಂಡಿರುವ ತಮಿಳುನಾಡ ಮೂಲದ ಪರಮಾನಂದ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 2024ರ ಅಕ್ಟೋಬರ್ 26ರಂದು ತಡರಾತ್ರಿ ಬೆಳಿಗ್ಗಿನ ಜಾವ ಬ್ಯಾಂಕ್ ನಲ್ಲಿ ಕಳವು ಆಗಿತ್ತು. 17 ಕೆಜಿ 705 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 220 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಉಮಾ ಪ್ರಶಾಂತ್ ತಿಳಿಸಿದ್ದಾರೆ.
ತಮಿಳುನಾಡಿನ ಮೂವರು ಹಲವು ವರ್ಷಗಳಿಂದ ನ್ಯಾಮತಿ ಪಟ್ಟಣದಲ್ಲಿ ನೆಲೆಸಿದ್ದರು. ಬೇಕರಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ. ಬುಧವಾರ ರಾತ್ರಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಉಳಿದ ಚಿನ್ನಾಭರಣ ಎಲ್ಲಿ ಅಡಗಿಸಿಟ್ಟಿದ್ದಾರೆ ಮತ್ತು ಏನೆಲ್ಲಾ ಮಾಡಿದ್ದಾರೆ ಎಂಬ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್ಪಿ ವಿವರಿಸಿದರು.
ನ್ಯಾಮತಿ ಪಟ್ಟಣದ ಎಸ್ ಬಿ ಐ ಶಾಖೆಯ ಕಿಟಕಿ ಮುರಿದು ಒಳಪ್ರವೇಶಿಸಿದ್ದ ದರೋಡೆಕೋರರು ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಒಟ್ಟು 509 ಗ್ರಾಹಕರು ತಮ್ಮ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದರು.