SUDDIKSHANA KANNADA NEWS/ DAVANAGERE/ DATE-11-06-2025
ದಾವಣಗೆರೆ: ದಾವಣಗೆರೆ ನಗರದ ಜಾನುವಾರುಗಳ ಮಾಲೀಕರು ತಮ್ಮ ಪ್ರಾಣಿಗಳನ್ನು ರಸ್ತೆಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಅಲೆಯಲು ಮತ್ತು ಮೇಯಲು ಬಿಡುವುದನ್ನು ನಿಷೇಧಿಸಲಾಗಿದೆ.
ಬಿಡಾಡಿ ದನಕರುಗಳ ಮಾಲೀಕರು ದಾವಣಗೆರೆ ಮಹಾನಗರಪಾಲಿಕೆಯ ವ್ಯಾಪ್ತಿಯ ರಸ್ತೆಗಳಲ್ಲಿ, ರಸ್ತೆ ವಿಭಜಕ ಮತ್ತು ಪಾದಚಾರಿ ಮಾರ್ಗಗಳಲ್ಲಿ ಉದ್ಯಾನಗಳಲ್ಲಿ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ, ಶಾಲಾ ಕಾಲೇಜುಗಳ ಬಳಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳ ಹಾವಳಿಯಿಂದ ಸುಗಮ ವಾಹನ ಸಂಚಾರ ಮತ್ತು ಟ್ರಾಫಿಕ್ ನಿರ್ವಹಣೆಗೆ ತೀವ್ರ ತೊಡಕುಂಟಾಗುತ್ತಿದೆ. ನಗರ ಹಸಿರೀಕರಣದ ಪ್ರಯುಕ್ತ ನೆಡಲಾದ ಗಿಡಗಳು ಜಾನುವಾರುಗಳಿಂದ ನಾಶಗೊಳ್ಳುತ್ತಿರುವುದು ಮತ್ತು ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯವುಂಟಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬಂದಿವೆ.
ಕರ್ನಾಟಕ ಪೌರನಿಗಮಗಳ ಅಧಿನಿಯಮ, ಕರ್ನಾಟಕ ದನಕರು ಅತಿಕ್ರಮ ಪ್ರವೇಶ ಅಧಿನಿಯಮದಡಿಯಲ್ಲಿ ಉಲ್ಲಂಘನೆಗಳು ಕಂಡುಬಂದಲ್ಲಿ ಜಾನುವಾರು ಮಾಲೀಕರ ವಿರುದ್ಧ ದಂಡ ವಿಧಿಸಿ ಕಾನೂನು ಕ್ರಮವಹಿಸಲಾಗುವುದು.
ಹಾಗೆಯೇ ಮಹಾನಗರ ಪಾಲಿಕೆಯ ವತಿಯಿಂದ ಬಿಡಾಡಿಯಾಗಿ ಅಲೆಯುತ್ತಿರುವ ಪ್ರಾಣಿಗಳನ್ನು ಸೆರೆಹಿಡಿದು ಗೋಶಾಲೆಗೆ ಸಾಗಿಸಲಾಗುವುದು. ಮತ್ತು ಇದರಿಂದ ಜಾನುವಾರು ಮಾಲೀಕರಿಗೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಮಹಾನಗರ ಪಾಲಿಕೆಯು ಹೊಣೆಯಾಗಿರುವುದಿಲ್ಲವೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.