SUDDIKSHANA KANNADA NEWS/ DAVANAGERE/ DATE:12-01-2024
ದಾವಣಗೆರೆ: ಬೆಸ್ಕಾಂ ರದ್ದು ಪಡಿಸಿರುವ ಅಕ್ರಮ- ಸಕ್ರಮ ಯೋಜನೆಯನ್ನು ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ನಗರದ ಜಯಚಾಮರಾಜೇಂದ್ರ ವೃತ್ತದಿಂದ ಆರಂಭಗೊಂಡ ರ‍್ಯಾಲಿಯು ಜಯದೇವ ವೃತ್ತದ ಮೂಲಕ ಸಾಗಿ ಹದಡಿ ರಸ್ತೆಯಲ್ಲಿರುವ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ತಲುಪಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ರೈತರು ಬಿತ್ತಿದ ಮುಖ್ಯ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಶೇಂಗಾ. ಸೂರ್ಯಕಾಂತಿ, ಸಜ್ಜೆ, ಜೋಳ, ರಾಗಿ, ಈರುಳ್ಳಿ, ನವಣೆ, ತರಕಾರಿ ಬೆಳೆಗಳು ಸರಿಯಾಗಿ ಫಸಲುಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಕಂಗಾಲಾಗಿದ್ದಾರೆ ಎಂದರು.
ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿ ರೈತರುಗಳು ಅಳಿದುಳಿದಿರುವ ಕೊಳವೆಬಾವಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ವಿದ್ಯುತ್ ಇಲಾಖೆಯು ಪ್ರಸ್ತುತದಲ್ಲಿ ಅಕ್ರಮ-ಸಕ್ರಮ
ಯೋಜನೆಯನ್ನು ರದ್ದುಪಡಿಸಿರುವುದು, ಮತ್ತು ನಿಗಧಿತ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಇರುವುದು, ಗುಣಮಟ್ಟದ ವಿದ್ಯುತ್ ನೀಡದಿರುವುದು. ಈ ಎಲ್ಲಾ ಕಾರಣಗಳಿಂದ ರೈತರಿಗೆ ಗಾಯದ
ಮೇಲೆ ಬರೆ ಎಳೆದಂತಾಗಿದೆ. ವಲಸೆ ಹೋಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಇಲಾಖೆ ಸ್ಥಗಿತಗೊಳಿಸಿರುವ ಅಕ್ರಮ-ಸಕ್ರಮ ವಿದ್ಯುತ್ ಶಕ್ತಿ ಯೋಜನೆಯನ್ನು ಮತ್ತೆ ಮುಂದುವರೆಸಬೇಕು, ಎಲ್.ಟಿ. ಲೈನ್ ಮತ್ತು ಪವರ್‌ಲೈನ್ 500 ಮೀಟರ್ ಒಳಗೆ ಇದ್ದರೆ ವಿದ್ಯುತ್ ಪರಿವರ್ತಕ, ಇದಕ್ಕಿಂತ ಹೆಚ್ಚು ದೂರವಿದ್ದರೆ ಸೋಲಾರ್ ಅಳವಡಿಸುವ ನಿಯಮ ಕೈ ಬಿಡಬೇಕು, ಟಿ.ಸಿ. ಸುಟ್ಟುಹೋದ 24 ಗಂಟೆಯ ಒಳಗೆ ಪರ್ಯಾಯ ಟಿ.ಸಿ.ಯನ್ನು ನೀಡಬೇಕು, ಈಗಾಗಲೇ ಪೆಂಡಿAಗ್ ಇರುವ ಟಿ.ಸಿ. ಗಳನ್ನು ತಕ್ಷಣವೇ ನೀಡಬೇಕು, ರೈತರ ಮೇಲೆ ಬೆಸ್ಕಾಂ ಲೈನ್‌ಮೆನ್‌ಗಳ ನಡೆಸುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸಬೇಕು, ರಾತ್ರಿ ಸಮಯದಲ್ಲಿ ನೀಡುವಂತೆ ಹಗಲು ಕೂಡ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸೇನೆಯ ಯಲೋದಳ್ಳಿ ರವಿ,ಕುರ್ಕಿ ಹನುಮಂತಪ್ಪ, ತಿಪ್ಪೇಸ್ವಾಮಿ, ಚಿರಂಜೀವಿ ಚಿಕ್ಕಮಲ್ಲನಹೊಳೆ, ದ್ಯಾಮಜ್ಜಿ ಹನುಮಂತಪ್ಪ,ನಾಗರಾಜ ಕಸವನಹಳ್ಳಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.