SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಸ್ವಾಭಿಮಾನಿ ಬಳಗವು ಯುವಪೀಳಿಗೆ ಮತ್ತು ಜನರಲ್ಲಿ ಸಾಹಿತ್ಯದ ಅಭಿರುಚಿ ಹಾಗೂ ಓದುವ ಸಂಸ್ಕೃತಿ ಬೆಳೆಸುವ ಸಲುವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ “ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಡಿಸೆಂಬರ್ 20ರೊಳಗೆ ಸಲ್ಲಿಸಬೇಕು ಎಂದು ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ವಿಜೃಂಭಿಸುತ್ತಿದೆ. ಈ ಕಾರಣಕ್ಕಾಗಿ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಈ ರೀತಿಯ ವಿಶಿಷ್ಟ ಅಭಿಯಾನ ಆಯೋಜಿಸಲಾಗಿದೆ. ಮೂರು ವಿಭಾಗಗಳಲ್ಲಿ
ಸ್ಪರ್ಧೆ ಇದ್ದು, ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ ಎಂಬ ವಿಷಯದ ಕುರಿತು ಸುಮಾರು 500ರಿಂದ ಒಂದು ಸಾವಿರ ಪದಗಳಲ್ಲಿ ಕನ್ನಡದಲ್ಲಿ ಕೈ ಬರಹದಲ್ಲೇ ಪ್ರಬಂಧ ಬರೆದು ಕಳಿಸಬೇಕು ಎಂದು
ಹೇಳಿದರು.
8ನೇ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪದವಿಯಿಂದ ಸ್ನಾತಕೋತ್ತರ ಪದವೀಧರರು, 25ರಿಂದ 35 ವರ್ಷದೊಳಗಿನ ಗೃಹಿಣಿಯರು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಪ್ರಬಂಧ ಬರೆದು ಕಳುಹಿಸಬೇಕು. ಮೂರು ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಮೂರು ವಿಭಾಗಗಳಲ್ಲಿಯೂ ಪ್ರಥಮ 20 ಸಾವಿರ, ದ್ವಿತೀಯ ಹತ್ತು ಸಾವಿರ, ಹಾಗೂ ತೃತೀಯ 5 ಸಾವಿರ ರೂಪಾಯಿ ನೀಡಿ ಗೌರವಿಸಲಾಗುವುದು. ಐದು ನೂರು ಮಂದಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕ ಕೊಡಮಾಡಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜನವರಿ ಮೊದಲ ವಾರದಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಅಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಾ ಸ್ಪರ್ಧೆ ಇದ್ದು, ಗೆದ್ದವರಿಗೆ ವಿಶೇಷ ಬಹುಮಾನ ಕೊಡಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಡಿ.20ರೊಳಗೆ ದಾವಣಗೆರೆಯ ಇನ್ ಸೈಟ್ ಸಂಸ್ಥೆಗೆ ಖುದ್ದಾಗಿ ಆಗಮಿಸಿ ಅಥವಾ ಪೋಸ್ಟ್ ಮೂಲಕ ಕಳುಹಿಸಿಕೊಡಬಹುದು. ಐಡಿಯೊಂದಿಗೆ ವಿದ್ಯಾರ್ಥಿಗಳು ಆಗಮಿಸಬೇಕು. ಮುಂಬರುವ ದಿನಗಳಲ್ಲಿ ಸ್ವಾಭಿಮಾನಿ ಬಳಗದ ವತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿ ವಿನೂತನ ಕಾರ್ಯಕ್ರಮ ನಡೆಸಲಾಗುವುದು. ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಅಭಿವೃದ್ಧಿ ವಿಷಯದ ಕುರಿತಂತೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಬಂಧ ತಲುಪಿಸುವವರು ಇನ್ ಸೈಟ್ಸ್ ಐಎಎಸ್ ಆಫೀಸ್, ಫಸ್ಟ್ ಫ್ಲೋರ್,ಜಾಧವ್ ಕಾಂಪ್ಲೆಕ್ಸ್, ರಿಂಗ್ ರೋಡ್, ಜಿಲ್ಲಾಧಿಕಾರಿಗಳ ನಿವಾಸದ ಬಳಿ, ನಿಜಲಿಂಗಪ್ಪ ಬಡಾವಣೆ ಇಲ್ಲಿಗೆ ತಲುಪಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ 9606388288, 6363682537 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷ ಶಿವಕುಮಾರ್ ಡಿ. ಶೆಟ್ಟರ್, ಕೆ. ಶಿವಕುಮಾರ್, ಡಿ. ವಿರೂಪಾಕ್ಷಪ್ಪ ಪಂಡಿತ್, ಪುರಂದರ ಲೋಕಿಕೆರೆ ಮತ್ತಿತರರು ಹಾಜರಿದ್ದರು.