SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಶಾಲಾ ವಿದ್ಯಾರ್ಥಿಗಳು ಶೌಚ ಸೇರಿದಂತೆ ಇತರೆ ಸ್ವಚ್ಛಗೊಳಿಸುವ ಕೋಲಾಹಲ ತಣ್ಣಗಾಗುವ ಮೊದಲೇ ಬೆಣ್ಣೆನಗರಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರು ಶೌಚಗೊಳಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಶಿಕ್ಷಕಿಯರ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆಯು ಶಿಕ್ಷಕಿ ಅಮಾನತುಗೊಳಿಸಿ ಆದೇಶಿಸಿದೆ.
ದಾವಣಗೆರೆ ತಾಲ್ಲೂಕಿನ ಮೆಳಕಟ್ಟೆ ಸರ್ಕಾರಿ ಹೈಸ್ಕೂಲ್ ನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಶೌಚ ಹಾಗೂ ಕೊಠಡಿ ಸ್ವಚ್ಚಗೊಳಿಸಿ ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ವಿದ್ಯಾರ್ಥಿಗಳನ್ನು ಸ್ವಚ್ಛಗೊಳಿಸಲು ಬಳಸಿಕೊಂಡ ಪರಿ ವಿವಾದಕ್ಕೂ ಕಾರಣವಾಗಿತ್ತು. ಆದ್ರೆ, ಈಗ ಅಸಲಿ ಸತ್ಯ ಬಯಲಾಗಿದೆ. ಇಂಗ್ಲೀಷ್ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯ ನಡುವಿನ ಮುಸುಕಿನ ಗುದ್ದಾಟಕ್ಕೆ ವಿದ್ಯಾರ್ಥಿಗಳು ಬಲಿಪಶುವಾಗಿದ್ದಾರೆ. ಇಂಗ್ಲೀಷ್ ಶಿಕ್ಷಕಿ ಸಾವಿತ್ರಮ್ಮರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಏನಾಗಿತ್ತು..?
ಸರ್ಕಾರಿ ಪ್ರೌಢ ಶಾಲೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಾಲೆಯ ಸ್ವಚ್ಛಗೊಳಿಸುವ ವಿಡಿಯೋ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿಯೂ ಪ್ರಸಾರ ಆಗಿತ್ತು. ಶಾಲೆಯ ಸಮವಸ್ತ್ರದಲ್ಲಿಯೇ ಪೊರಕೆ ಹಿಡಿದು ಶೌಚಾಲಯ ಸ್ವಚ್ಚ ಮಾಡಿದ ಬಾಲಕಿಯರು ಶಾಲೆಯ ಸಮವಸ್ತ್ರ ಧರಿಸಿದ್ದರು. ಮಕ್ಕಳು ಶೌಚಾಲಯ ಸ್ವಚ್ಚ ಮಾಡುವ ವಿಡಿಯೋ ಅನ್ನು ಶಾಲಾ ಶಿಕ್ಷಕಿಯೇ ವೈರಲ್ ಆಗುವಂತೆ ನೋಡಿಕೊಂಡಿದ್ದೇ ಯಾಕೆ ಎನ್ನೋ ಕುತೂಹಲ ಕೆರಳುವಂತೆ ಮಾಡಿತ್ತು.
ಸಹಶಿಕ್ಷಕಿಯ ಮೇಲಿನ ಹಳೆಯ ದ್ವೇಷಕ್ಕೆ ತರಗತಿ ಶಿಕ್ಷಕಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಈ ಪ್ರಕರಣ ಗಮನದಲ್ಲಿಟ್ಟುಕೊಂಡು ತನ್ನ ಸಹೊದ್ಯೋಗಿ ಮೇಲೆ ಗೂಬೆ ಕೂರಿಸುವ ಷಡ್ಯಂತ್ರವನ್ನು
ಶಿಕ್ಷಕಿಯೇ ರೂಪಿಸಿದ್ದು ತನಿಖೆ ವೇಳೆ ಬಯಲಾಗಿದೆ. ಇಬ್ಬರು ಶಿಕ್ಷಕಿಯರ ಶೀತಲ ಸಮರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಗ್ರಾಮಸ್ತರು ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ದೂರು ನೀಡಿದ್ದರು. ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ಮಾಡಿದ್ದರು.
ಹೈಸ್ಕೂಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ದಾವಣಗೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಅವರು ಶಾಲೆಗೆ ಭೇಟಿ ನೀಡಿದರು. ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ದಾವಣಗೆರೆ ತಾಲ್ಲೂಕಿನ ಮೆಳಕಟ್ಟಿ ಶಾಲೆಯಲ್ಲಿ ಫೆಬ್ರವರಿ 12ರಂದು ನಡೆದಿದೆ ಎನ್ನಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ವರದಿಯಲ್ಲೇನಿದೆ…?
ದಾವಣಗೆರೆ ತಾಲ್ಲೂಕಿನ ಉತ್ತರ ವಲಯದ ಮೆಳ್ಳಿಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶೌಚಾಲಯವನ್ನು 10 ಕ್ಕೂ ಅಧಿಕ ಶಾಲಾ ಮಕ್ಕಳಿಂದ ಸ್ವಚ್ಛ ಮಾಡುತ್ತಿರುವ ವಿಷಯ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಈ ರೀತಿ ಶಾಲಾ ಮಕ್ಕಳಿಂದ ಶೌಚಾಲಯವನ್ನು ಶುಚಿಗೊಳಿಸುತ್ತಿರುವುದು ಅಮಾನವೀಯ ವರ್ತನೆಯಾಗಿರುತ್ತದೆ. ಉಲ್ಲೇಖ ( 1 ) ರ ಇಲಾಖಾ ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯ ಮತ್ತು ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಸಹ ವಿದ್ಯಾರ್ಥಿಗಳಿಂದ ಕೈಗೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ, ಆಂಗ್ಲ ಶಿಕ್ಷಕಿ ಸಾವಿತ್ರಿ ಇವರು ಸದರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಶೋಭಾ ಎ. ಅವರ ಮೇಲಿನ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಉದ್ದೇಶಪೂರ್ವಕವಾಗಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯವನ್ನು ಸ್ವತಃ ತಾವೇ ಮುಂದೆ ನಿಂತು ಮಾಡಿಸಿ ವಿಡಿಯೋ ಮಾಡಿ, ಸುದ್ದಿ ಮಾಧ್ಯಮಕ್ಕೆ ರವಾನಿಸಿರುವುದಾಗಿ ಎಸ್ ಡಿಎಂಸಿ ಅಧ್ಯಕ್ಷರು, ವಿದ್ಯಾರ್ಥಿಗಳು ಹೇಳಿಕೆಯಿಂದ ದೃಢಪಡುತ್ತಿದೆ.
ಮುಖ್ಯ ಶಿಕ್ಷಕಿ ಹಾಗೂ ಆಂಗ್ಲ ವಿಷಯದ ಶಿಕ್ಷಕರಿಗೂ ಒಳಜಗಳ ಇದ್ದದ್ದು ಗೊತ್ತಾಗಿದೆ. 2024ರ ಫೆಬ್ರವರಿ 8ರಂದು ಸಾವಿತ್ರಮ್ಮ ಸಿ. ಕೆ ಅವರು ಆಂಗ್ಲ ಶಿಕ್ಷಕಿಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಕಾರ್ಯಕ್ಕೆ ತೊಂದರೆಯುಂಟು, ಮಾಡಿರುವುದಕ್ಕೆ ಮತ್ತು ಮುಖ್ಯ ಶಿಕ್ಷಕಿಗೆ ಏರು ಧ್ವನಿಯಲ್ಲಿ ಮಾತನಾಡಿರುವ ದುವರ್ತನೆಯ ಬಗ್ಗೆ ನೀಡಿದ ಕಾರಣ ಕೇಳಿ ನೋಟೀಸಿಗೆ ಉತ್ತರ ನೀಡದೇ ಮುಖ್ಯ ಶಿಕ್ಷಕಿಯ ಹೆಸರು ಕೆಡಿಸುವ ಪ್ರಯತ್ನ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಮೇಲ್ಕಂಡ ಅಂಶಗಳನ್ನು ಗಮನಿಸಿದಾಗ ಸ್ಥಳ ಪರಿಶೀಲನೆಯಲ್ಲಿ ಕಂಡುಬಂದ ಮುಖ್ಯ ಶಿಕ್ಷಕಿ ಹೇಳಿಕೆ, ಎಸ್.ಡಿ.ಎಂ.ಸಿ. ಅಧ್ಯಕ್ಷರ ಹೇಳಿಕೆ, ಗ್ರಾಮಸ್ಕರ ಹೇಳಿಕೆ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೇಳಿಕೆ ಗಮನಿಸಿದಾಗ ಸಾವಿತ್ರಮ್ಮ ಸಿ.ಕೆ. ಅವರು ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ್ದು, ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ.
ಸಿ. ಕೆ. ಸಾವಿತ್ರಮ್ಮ ಅವರ ಮೇಲೆ ಕೆ.ಸಿ.ಎಸ್.ಆರ್ ನಿಯಮಾವಳಿ ಹಾಗೂ ನಡತೆ ನಿಯಮಾವಳಿಯ ರೀತ್ಯಾ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಶಿಫಾರಸು ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ, ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಶಾಲಾ ನಿರ್ವಹಣಾ ಅನುದಾನವನ್ನು ಬಳಸಿಕೊಂಡು, ಶಾಲಾ ಅಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು
ಕೈಗೊಳ್ಳದೇ, ಶಾಲಾ ಶೌಚಾಲಯದ ಶುಚಿತ್ವವನ್ನು ಶಾಲಾ ಮಕ್ಕಳಿಂದ ಮಾಡಿಸಿರುವುದು ಸಾವಿತ್ರಮ್ಮ ಸಿ.ಕೆ. , ಸಹ ಶಿಕ್ಷಕರು ( ಆಂಗ್ಲ ಭಾಷೆ ) , ಪ್ರೌಢಶಾಲೆ ಮಳೆಕಟ್ಟೆ , ದಾವಣಗೆರೆ ಉತ್ತರ ವಲಯ ಇವರ ಕರ್ತವ್ಯ ಲೋಪವಾಗಿರುತ್ತದೆ. ಈ ರೀತಿ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡು, ಬೇಜವಾಬ್ದಾರಿತನ ತೋರಿದ್ದಾರೆ. ಇದು ಸ್ಪಷ್ಟವಾಗಿದೆ. ಹಾಗಾಗಿ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ.
ಸಾವಿತ್ರಮ್ಮ ನಿರ್ದೇಶನಗಳನ್ನು ಪಾಲಿಸದೇ, ಶಾಲಾ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಚಗೊಳಿಸುವ ಮೂಲಕ ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು 1957 ರ ನಿಯಮ 10 ( 1 ) ರಡಿ ಪ್ರದತ್ತವಾದ ಅಧಿಕಾರದಡಿಯಲ್ಲಿ ಇಲಾಖೆ ವಿಚಾರಣೆ ಬಾಕಿ ಇಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಜೀವನಾಂಶ ಭಕ್ತಿ ಪಡೆಯಲು ಅರ್ಹರಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಮೇಲಾಧಿಕಾರಿಗಳ ಪೂರ್ವಾನುಮೋದನೆ ಇಲ್ಲದ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಸಾವಿತ್ರಮ್ಮರಿಗೆ ಸೂಚನೆ ನೀಡಲಾಗಿದೆ.