SUDDIKSHANA KANNADA NEWS/ DAVANAGERE/ DATE:09-12-2024
ದಾವಣಗೆರೆ: ಸ್ವಾಭಿಮಾನಿ ಬಳಗವು ಶಿಕ್ಷಣ ರಂಗದಲ್ಲಿನ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಡಿಸೆಂಬರ್ 18ರಂದು ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಎಂಬ ವಿಶಿಷ್ಟ ಅಭಿಯಾನ ಆಯೋಜಿಸಿದ್ದು, ಹತ್ತು ಶಾಲೆಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯ ಸೇರಿದಂತೆ ವಸ್ತುಸ್ಥಿತಿ ಅಧ್ಯಯನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಹೊನ್ನಾಳಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಳಗದ ವತಿಯಿಂದ ಶಿಕ್ಷಣ ಅದಾಲತ್ ನಡೆಸಲಾಗುವುದು. ಸೂರಗೊಂಡನಕೊಪ್ಪ, ಜೋಗ, ಚಿನ್ನಿಕಟ್ಟೆ, ಮಾದಾಪುರ, ಸವಳಂಗ, ಸೋಗಲು, ಚಟ್ನಳ್ಳಿ ಸೇರಿದಂತೆ
ಹತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಮುಖಂಡರ ಜೊತೆ ಸಂವಾದ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲೆಡೆ ಅಸಮಾನತೆ ಹೆಚ್ಚಾಗಲು ಕಾರಣ ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ. ಇದು ತೊಲಗಿಸಬೇಕೆಂಬ ನಿಟ್ಟಿನಲ್ಲಿ ಬಳಗವು ಇಂಥ ವಿನೂತನ ಅಭಿಯಾನ ಹಮ್ಮಿಕೊಂಡಿದೆ. ಕೇವಲ ಹೊನ್ನಾಳಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಹರಿಹರ, ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಎಲ್ಲೆಡೆ ಹಮ್ಮಿಕೊಳ್ಳಲಾಗುವುದು. ಡಿಸೆಂಬರ್ 22 ಬೀದರ್ , 23ರಂದು ಯಾದಗಿರಿಯಲ್ಲಿ ಶಿಕ್ಷಣ ಅದಾಲತ್ ನಡೆಯಲಿದ್ದು. ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಎಸ್. ಎಸ್. ಎಲ್. ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿಲ್ಲ. ಹೊನ್ನಾಳಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಬಹುದು. ಆದ್ರೆ, ಯಾದಗಿರಿಯಂಥ ಪ್ರದೇಶಗಳಲ್ಲಿ ಸ್ವಾಭಿಮಾನಿ ಬಳಗದ ಶಿಕ್ಷಣ ಅದಾಲತ್ ಅವಶ್ಯಕತೆ ಇದೆ. ನೂರಾರು ಜನರು ಸ್ವಾಗತಿಸುತ್ತಿದ್ದಾರೆ. ಹಾಗಾಗಿ, ತಿಂಗಳಿಗೆ ಮೂರು ಕಡೆಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ವಿವರಿಸಿದರು.
ಸ್ವಾಭಿಮಾನಿ ಬಳಗವು ಕರ್ನಾಟಕದಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವುದು ಖಚಿತ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಕಾಡುತ್ತಿದೆ. ಬೆಂಗಳೂರು, ದಾವಣಗೆರೆಯ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ಸಾಮರ್ಥ್ಯವು ಹಳ್ಳಿಯ ವಿದ್ಯಾರ್ಥಿಗಳಿಗೆ ತಲುಪಿಸಬೇಕೆಂಬ ಕನಸಿದೆ. ಶಾಸಕರು, ಸಂಸದರು ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಕೆಲ ಶಾಲೆಗಳಲ್ಲಿ ಒಬ್ಬರು, ಇಬ್ಬರು, ಮೂವರು ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕಟಿಬದ್ದರಾಗಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿನ ಪರಿಸ್ಥಿತಿ ಅವಲೋಕನ ಮಾಡುವುದು, ಡೆಸ್ಕ್, ಶೂಸ್, ಸಮವಸ್ತ್ರ, ಬ್ಯಾಗ್, ಪುಸ್ತಕ, ಪೆನ್ಸಿಲ್, ಬೋರ್ಡ್, ಆಟದ ಮೈದಾನ, ಗುಣಮಟ್ಟದ ಕಲಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳು ಹಾಗೂ ಮೂಲಭೂತ ಸೌಲಭ್ಯಗಳ ಕುರಿತಂತೆ ಸಂವಾದ ನಡೆಸಿ ಮಾಹಿತಿ ಪಡೆಯಲಾಗುವುದು. ಹೊನ್ನಾಳಿ – ನ್ಯಾಮತಿ ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಸಮಗ್ರ ವರದಿ ತಯಾರಿಸಲಾಗುವುದು. ದೊಡ್ಡ ಕಂಪೆನಿಗಳು ಬರುವ ಆದಾಯದಲ್ಲಿ ಶೇಕಡಾ 2 ರಿಂದ 3ರಷ್ಟು ಲಾಭಾಂಶವನ್ನು ಶೈಕ್ಷಣಿಕ ಕ್ಷೇತ್ರಕ್ಕೆ ವಿನಿಯೋಗ ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲು ನೆರವು ಪಡೆಯುವ ಕುರಿತ ಆಲೋಚನೆ ಇದೆ. ಇದು ಸಾಕಾರಗೊಂಡರೆ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರು, ಸಂಸದರು ಸ್ವಂತ ವ್ಯವಹಾರಗಳು, ಸ್ವಂತ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ವಿನಾಃ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡದಿರುವುದು ಬೇಸರದ ಸಂಗತಿ. ಜನಪ್ರತಿನಿಧಿಗಳಲ್ಲದಿದ್ದರೂ ಈ ರೀತಿ ಕೆಲಸ ಮಾಡಬಹುದು ಎಂದು ಸಾಧಿಸಿ ತೋರಿಸುವ ನಿಟ್ಟಿನಲ್ಲಿ ಶ್ರಮಿಸಲಿರುವ ಸ್ವಾಭಿಮಾನಿ ಬಳಗವು ಹೊಸ ನಾಯಕರ ಸೃಷ್ಟಿಯತ್ತವೂ ಗಮನ ಹರಿಸಲಿದೆ. ದೊಡ್ಡ ಕಾರ್ಯಕ್ರಮ, ಜನುಮ ದಿನ, ಹಬ್ಬಗಳ ಆಚರಣೆಯ ನಾಯಕರು ಬೇಕಿಲ್ಲ. ಸೃಜನಶೀಲತೆಯ ನಾಯಕರ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಹೊನ್ನಾಳಿಯಲ್ಲಿ ಲೋಕಸಭೆ ಚುನಾವಣೆ ವೇಳೆ ಪಾದಯಾತ್ರೆ ಮಾಡಿದ್ದೆ. ಇಲ್ಲಿನ ಯುವಕರು ಪ್ರತಿಭಾವಂತರಿದ್ದರೂ ದಾರಿ ತಪ್ಪಿರುವ ಉದಾಹರಣೆಗಳಿವೆ. ಪದವಿ ಓದಿದ್ದರೂ ಕೆಲಸ ಸಿಕ್ಕಿಲ್ಲ. ಹೊನ್ನಾಳಿಯಲ್ಲಿ ಕೈಗಾರಿಕೆ ಇಲ್ಲ. ಅಲ್ಲಿಲ್ಲಿ ಒಂದೆರಡು ಇರುವುದು ಬಿಟ್ಟರೆ ದೊಡ್ಡ ಕೈಗಾರಿಕೆಗಳು ಬಂದಿಲ್ಲ. ಹೊನ್ನಾಳಿಗೂ ಮಲತಾಯಿ ಧೋರಣೆ ಆಗಿದೆ ಎಂದೆನಿಸುತ್ತದೆ. ಹೊಸಪೇಟೆ – ಶಿವಮೊಗ್ಗ ರಸ್ತೆ ಅಗಲೀಕರಣ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಗೆ ಬರುವುದೇ ಕಡಿಮೆ. ನಿರ್ಲಕ್ಷ್ಯ ನೋಡಿಕೊಂಡು ನಾವು ಸುಮ್ಮನೆ ಕೂರಬಾರದು ಎಂದು ಕರೆ ನೀಡಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕೃಷಿ ಅದಾಲತ್, ಜನರ ಸಮಸ್ಯೆ ಪರಿಹರಿಸಲು ಜನತಾ ಅದಾಲತ್ ನಡೆಸಲಾಗುವುದು. ಈ ಮೂಲಕ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಬಳಗ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾಳಿ ಘಟಕದ ವಿನಯ್, ನವೀನ್ ಶೆಟ್ಟಿ, ನಿವೃತ್ತ ಯೋಧ ವಾಸಪ್ಪ, ದೇವರಾಜ್ ಮತ್ತಿತರರು ಹಾಜರಿದ್ದರು.