SUDDIKSHANA KANNADA NEWS/ DAVANAGERE/ DATE:20-08-2024
ದಾವಣಗೆರೆ: ಜಿಲ್ಲಾ ಪೊಲೀಸ್ ಇಲಾಖೆಯ ದುರ್ಗಾ ಪಡೆ ಸಕ್ರಿಯವಾಗಿದ್ದು, ರೋಡ್ ರೋಮಿಯೋಗಳು ಹಾಗೂ ಬೀದಿ ಕಾಮಣ್ಣರಿಗೆ ನಡುಕ ಶುರುವಾಗಿದೆ.
ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಸರಗಳ್ಳತನ, ತೊಂದರೆ ಅನುಭವಿಸುತ್ತಿರುವ ಕುರಿತಂತೆ ಮಾಹಿತಿ ಕಲೆ ಹಾಕಿರುವ ದುರ್ಗಾ ಪಡೆಯು ಎಲ್ಲೆಲ್ಲಿ ಸಮಸ್ಯೆಗಳಿವೆಯೋ
ಅಲ್ಲಿಗೆ ಭೇಟಿ ನೀಡಿ ತೊಂದರೆ ಕೊಡುವವರಿಗೆ ಪಾಠ ಕಲಿಸಲು ದುರ್ಗಾ ಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸನ್ನದ್ಧರಾಗಿದ್ದಾರೆ.
ಜಿಲ್ಲಾ ಪೊಲೀಸ್ ದುರ್ಗಾ ಪಡೆಯು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸೈಬರ್ ಕ್ರೈಂ ಹಾಗೂ ಅದರಿಂದ ಸುರಕ್ಷತೆಗಳು, ಡ್ರಗ್ಸ್ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಕಾನೂನು ಕ್ರಮಗಳು, ತುರ್ತು ಸಹಾಯವಾಣಿ 112 ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ದುರ್ಗಾ ಪಡೆಯು, ಪಾರ್ಕ್ ಗಳಲ್ಲಿ ಹಿರಿಯ ನಾಗರಿಕರನ್ನು ಭೇಟಿಯಾಗಿ ಹಿರಿಯ ನಾಗರೀಕರ ಸಹಾಯವಾಣಿ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಹಾಸ್ಟೆಲ್ ಗಳಲ್ಲಿ ಹದ್ದಿನ ಕಣ್ಣು:
ಮಹಿಳಾ ನಿಲಯಗಳಿಗೆ ಹಾಗೂ ಯುವತಿಯರ ಹಾಸ್ಟೆಲ್ ಗಳು ಹಾಗೂ ಪಾರ್ಕ್ ಗಳಲ್ಲಿ ಮಹಿಳೆಯರು, ಯುವತಿಯರನ್ನು ಭೇಟಿ ಮಾಡಿ ಮಹಿಳಾ ದೌರ್ಜನ್ಯ ಕಾಯ್ದೆಗಳ ಬಗ್ಗೆ ಅರಿವು ಹಾಗೂ ಈ ಬಗ್ಗೆ ಠಾಣೆಗೆ ದೂರು ನೀಡಿ ಎಂದು ಸಲಹೆ ನೀಡಲಾಗುತ್ತಿದೆ.
ಕಾಲೇಜ್, ರಸ್ತೆ , ಪಾರ್ಕ್ ಗಳಲ್ಲಿ ವಿದ್ಯಾರ್ಥಿನಿಯರಿಗೆ, ಯುವತಿರಿಗೆ, ಮಹಿಳೆಯರಿಗೆ ಚುಡಾಯಿಸುವ ಪ್ರವೃತ್ತಿಯುಳ್ಳ ಯುವಕರಿಗೆ, ರೋಡ್ ರೋಮಿಯೋಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವ ಪುಡಾರಿಗಳಿಗೆ ಸೂಕ್ತ ಕಾನೂನು
ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.
ಕಾಲೇಜ್ ಗೆ ಬಂಕ್ ಹೊಡೆದವ್ರಿಗೆ ಕ್ಲಾಸ್..!
ಕಾಲೇಜ್ ಕ್ಲಾಸ್ ಗಳಿಗೆ ಬಂಕ್ ಮಾಡಿ ಪಾರ್ಕ್ ಗಳಲ್ಲಿ ರಸ್ತೆ ಬದಿಗಳಲ್ಲಿ ಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸೂಕ್ತ ಬುದ್ದಿಮಾತು ಹೇಳಿ ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಹಾಗೂ ಸಮಾಜದಲ್ಲಿ ಮಾದರಿ ವಿದ್ಯಾರ್ಥಿಗಳಾಗುವಂತೆ ದುರ್ಗಾ ಪಡೆಯ ಸದಸ್ಯರು ಸಲಹೆ ನೀಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ನ ಈ ಕ್ರಮದಿಂದ ವಿದ್ಯಾರ್ಥಿಗಳು, ಪೋಷಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಮೊದಲ ಆದ್ಯತೆ ನೀಡಿರುವ ದುರ್ಗಾ ಪಡೆಯು ನಗರದಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ತುರ್ತು ಸಹಾಯವಾಣಿ 112
ನಗರದಲ್ಲಿ ಯುವತಿಯರ ಚುಡಾಯಿಸುವುದು, ಕಿರುಕುಳ ನೀಡುವುದು, ಬೀದಿ ಕಾಮಣ್ಣರ ಕಾಟ ಕಂಡುಬಂದರೆ ಕೂಡಲೇ ತುರ್ತು ಸಹಾಯವಾಣಿ 112 ಅಥವಾ ದಾವಣಗೆರೆ ಜಿಲ್ಲಾ ಪೊಲೀಸ್ ಕಂಟ್ರೂಲ್ ರೂಂ ನಂ : 9480803200 ಗೆ ಕರೆ
ಮಾಡಿ ತಿಳಿಸುವಂತೆ ಕೋರಲಾಗಿದೆ.