SUDDIKSHANA KANNADA NEWS/ DAVANAGERE/ DATE:18-08-2024
ದಾವಣಗೆರೆ: ನಗರದಲ್ಲಿ ಮಹಿಳೆಯರ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಆದ್ಯತೆಯತ್ತ ಪೊಲೀಸ್ ಇಲಾಖೆ ಚಿತ್ತ ನೆಟ್ಟಿದೆ. ಪುಂಡಪೋಕರಿಗಳಿಗೆ ಕಾದಿದೆ ಮಾರಿಹಬ್ಬ. ರಸ್ತೆ, ಕಾಲೇಜು ಬಳಿ ವಿದ್ಯಾರ್ಥಿನಿಯರು, ಮಹಿಳೆಯರು ಚುಡಾಯಿಸುವವರಿಗೆ ಪಾಠ ಕಲಿಸಲು ದುರ್ಗಾ ಪಡೆ ಸಜ್ಜಾಗಿದ್ದು, ಈಗಾಗಲೇ ಕಾರ್ಯಾಚರಣೆ ಶುರು ಮಾಡಿದೆ.
ಜಿಲ್ಲಾ ಪೊಲೀಸ್ ವತಿಯಿಂದ ಪಿಎಸ್ ಐ ಮಟ್ಟದ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ದುರ್ಗಾ ಪಡೆಯು ನಗರದ ಶಾಲಾ ಕಾಲೇಜು, ಬಸ್ ಸ್ಟ್ಯಾಂಡ್, ಪಾರ್ಕ್ ಗಳು ಸೇರಿದಂತೆ ಗುಂಪು ಸೇರುವ ಪ್ರದೇಶಗಳಲ್ಲಿ ಹಾಗು ಒಂಟಿಯಾಗಿ ಮಹಿಳೆಯರು ಸಂಚರಿಸುವ ಪ್ರದೇಶಗಳಲ್ಲಿ ಸಂಚರಿಸಿ ಕಾರ್ಯ ನಿರ್ವಹಿಸುತ್ತಿದೆ.
ದುರ್ಗಾ ಪಡೆಯ ಅಧಿಕಾರಿ ಸಿಬ್ಬಂದಿಗಳ ತಂಡ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ನಗರದ ಶಾಲಾ ಕಾಲೇಜುಗಳು, ಪಾರ್ಕ್ ಗಳು, ವಿದ್ಯಾರ್ಥಿನಿ ನಿಲಯಗಳಿಗೆ ಭೇಟಿ ನೀಡಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆಗಳ ಬಗ್ಗೆ, ಸರಗಳ್ಳರಿಂದ ಸುರಕ್ಷತೆ, ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮಗಳು, ತುರ್ತು ಸಹಾಯ ವಾಣಿ 112 ಬಳಕೆ ಹಾಗೂ ಮಹಿಳೆಯರ ಸುರಕ್ಷತೆಗೆ ಇರುವ ದಾವಣಗೆರೆ ಸುರಕ್ಷಾ ಆಪ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕಾಲೇಜುಗಳ ಬಳಿ, ರಸ್ತೆಗಳಲ್ಲಿ ಸಂಚರಿಸುವ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಕೀಟಲೆ, ಚುಡಾಯಿಸುವಂತ ಪುಡಾರಿಗಳ ಮೇಲೆ ದುರ್ಗಾ ಪಡೆ ನಿಗಾವಹಿಸಿದೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತರಗತಿಗಳನ್ನು ಗೈರಾಗಿ ಪಾರ್ಕ್ ಗಳಲ್ಲಿ ಸುತ್ತಾಡುತ್ತಾ ಸಮಯ ವ್ಯರ್ಥ ಮಾಡುವಂತ ಯುವ ಪೀಳಿಗೆಗೆ ಪಾರ್ಕ್ ಗಳಲ್ಲಿ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಉತ್ತಮ ಶಿಕ್ಷಣ ಅಭ್ಯಾಸ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ದುರ್ಗಾ ಪಡೆ ಮಾಡುತ್ತಿದೆ.
ದುರ್ಗಾ ಪಡೆಯ ಅಧಿಕಾರಿ ಸಿಬ್ಬಂದಿ ನಗರದ ಶ್ರೀರಾಮ ಪಾರ್ಕ್, ವಿಶ್ವೇಶ್ವರಯ್ಯ ಪಾರ್ಕ್ ಗಳಲ್ಲಿ ಕಾಲೇಜು ಸಮಯದಲ್ಲಿ ಪಾರ್ಕ್ ನಲ್ಲಿ ಟೈಂಪಾಸ್ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಿಳುವಳಿಕೆ ಹೇಳಿ ಕಾಲೇಜು ಗೆ ಹೋಗಲು
ತಿಳಿಸುತ್ತಿದೆ.
ನಗರದ ಶ್ರೀರಾಮ ದೇವಸ್ಥಾನದ ಬಳಿ ದೇವಾಸ್ಥಾನಕ್ಕೆ ಬಂದ ಹೆಣ್ಣುಮಕ್ಕಳಿಗೆ ತಾವುಗಳು ಧರಿಸಿರುವ ಒಡವೆಗಳನ್ನು ಸುರಕ್ಷಿತ ವಾಗಿ ಇಟ್ಟುಕೊಳ್ಳುವ ಬಗ್ಗೆ ದುರ್ಗಾ ಪಡೆಯ ಅಧಿಕಾರಿ ಸಿಬ್ಬಂದಿಗಳು ಜಾಗೃತಿ ಮೂಡಿಸಿದರು.