SUDDIKSHANA KANNADA NEWS/ DAVANAGERE/ DATE:20-03-2025
ದಾವಣಗೆರೆ: ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ವಿಭಾಗೀಯ ಕಚೇರಿಯನ್ನು ದಾವಣಗೆರೆಯಲ್ಲಿಯೇ ಮರುಸ್ಥಾಪನೆ ಮಾಡಿ ಮುಂದುವರಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ನಿಯೋಗದೊಂದಿಗೆ ಖುದ್ದಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಓರಿಯೆಂಟಲ್ ಇನ್ಶುರೆನ್ಸ್ ಕಂಪನಿಯನ್ನು ದಾವಣಗೆರೆಯಲ್ಲಿ ರದ್ದುಗೊಳಿಸಿ ಮತ್ತು ಅದನ್ನು ಚಿತ್ರದುರ್ಗ ಶಾಖೆಯ ಕಚೇರಿಯೊಂದಿಗೆ ವಿಲೀನಗೊಳಿಸುವ ಬಗ್ಗೆ ದಾವಣಗೆರೆಯ ಏಜೆಂಟರುಗಳು ಸಂಸದರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಂಸದರು ಕೇಂದ್ರ ಸಚಿವೆ ನಿರ್ಮಲಾ ಸೀತರಾಮ್ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಅಂಕಿಅಂಶಗಳ ಸಮೇತ ದಾವಣಗೆರೆಯಲ್ಲಿ ಮುಂದುವರೆಸುವಂತೆ ಮನವಿ ಮಾಡಿದರು.
ದಾವಣಗೆರೆ ವಿಭಾಗೀಯ ಕಚೇರಿಗೆ ಹೋಲಿಸಿದರೆ ಚಿತ್ರದುರ್ಗ ಶಾಖಾ ಕಚೇರಿಯಲ್ಲಿ ಏಜೆಂಟ್‌ಗಳ ಸಂಖ್ಯೆ ತೀರಾ ಕಡಿಮೆಯಿದೆ ಹಾಗೂ 2022-23ನೇ ಸಾಲಿನಲ್ಲಿ ಚಿತ್ರದುರ್ಗ ಶಾಖೆಯ ಕಛೇರಿಯು ₹ 2.92 ಕೋಟಿ ವ್ಯವಹಾರವನ್ನು
ಹೊಂದಿದ್ದು ₹ 4.55 ಕೋಟಿಯ ಕ್ಲೈಮ್‌ನೊಂದಿಗೆ ₹ 1.93 ಕೋಟಿ ನಿವ್ವಳ ನಷ್ಟವಾಗಿದೆ. ದಾವಣಗೆರೆ ವಿಭಾಗೀಯ ಕಚೇರಿಯು ₹ 3.30 ಕೋಟಿ ವ್ಯವಹಾರವನ್ನು ಹೊಂದಿದ್ದು, 2.92 ಕೋಟಿ ಕ್ಲೈಮ್‌ನೊಂದಿಗೆ ಅಲ್ಪ ಲಾಭದಲ್ಲಿದೆ
ಎಂದು ತಿಳಿಸಿಕೊಡುವ ಕೆಲಸ ಮಾಡಿದರು.
ಈ ನಿಟ್ಟಿನಲ್ಲಿ ದಿನಾಂಕ 06-07-2024 ರಂದು ಓಐಸಿ ಪ್ರಾದೇಶಿಕ ಕಚೇರಿಯಿಂದ ಹೊರಡಿಸಲಾದ ಆದೇಶವನ್ನು ರದ್ದುಪಡಿಸಲು ಮತ್ತು ದಾವಣಗೆರೆ ವಿಭಾಗೀಯ ಕಚೇರಿಯನ್ನು ದಾವಣಗೆರೆಯಲ್ಲಿಯೇ ಮರುಸ್ಥಾಪಿಸುವಂತೆ ಮನವಿ ಮಾಡಿದರು.
ಪಕ್ಕದ ಎರಡು ಜಿಲ್ಲಾ ಕಛೇರಿಗಳ ವಿಲೀನಕ್ಕೆ ಅತೀ ಅವಶ್ಯವಿದ್ದಲ್ಲಿ ಚಿತ್ರದುರ್ಗ ಶಾಖಾ ಕಛೇರಿಯನ್ನು ದಾವಣಗೆರೆ ವಿಭಾಗೀಯ ಕಛೇರಿಯೊಂದಿಗೆ ವಿಲೀನಗೊಳಿಸಿ ದಾವಣಗೆರೆಯಲ್ಲಿ ಮಾತ್ರ ಒಂದೇ ಕಛೇರಿಯನ್ನು ಸ್ಥಾಪಿಸಲು ಸೂಚನೆಗಳನ್ನು ನೀಡುವಂತೆ ಕೇಳಿಕೊಂಡರು. ಸಮಸ್ಯೆಗೆ ಆದ್ಯತೆ ನೀಡಲು ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಗತ್ಯವಿರುವ ಹೆಚ್ಚಿನ ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.