SUDDIKSHANA KANNADA NEWS/ DAVANAGERE/ DATE:16-11-2024
ದಾವಣಗೆರೆ: ರೈತರ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ರಂಗದ ಕೊಡುಗೆ ಅನನ್ಯ. ರೈತರ ಬೆನ್ನೆಲಬು ಸಹಕಾರ ಕ್ಷೇತ್ರ. ಆದ್ದರಿಂದ ಯಾವುದೇ ಕಾರಣಕ್ಕೂ ಸಹಕಾರ ರಂಗದಲ್ಲಿ ರಾಜಕೀಯ ಬೆರೆಸಬಾರದು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಚನ್ನಗಿರಿ ಪಟ್ಟಣದ ಚನ್ಮಮ್ಮಾಜಿ ಸಮುದಾಯ ಭವನದಲ್ಲಿ ಸಹಕಾರ ಇಲಾಖೆ, ಸಹಕಾರ ಮಹಾ ಮಂಡಳ ಹಾಗೂ ತುಮ್ಕೋಸ್ ಸಹಯೋಗದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ತಾಲ್ಲೂಕಿನಲ್ಲಿ ಒಟ್ಟು 251 ಸಹಕಾರ ಸಂಘಗಳು ನೊಂದಾಣಿ ಮಾಡಿಕೊಂಡಿದ್ದು, ಇದರಲ್ಲಿ 206 ಸಂಘಗಳ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ತುಮ್ಕೋಸ್ ಸಂಸ್ಥೆ ಅತ್ಯುತ್ತಮ ಸಹಕಾರ ಸಂಘವಾಗಿ ಹೊರಹೊಮ್ಮಿ ಅಡಿಕೆ ಬೆಳೆಗಾರರ ಹಿತವನ್ನು ಸದಾ ಕಾಪಾಡುತ್ತಾ ಬಂದಿದೆ. ಅಧಿಕಾರಕ್ಕೆ ಬಂದಿರುವ ಎಲ್ಲ ಸರ್ಕಾರಗಳು ರೈತರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿವೆ. ರಾಜಕೀಯ ಪ್ರೇರಿತವಾಗಿ ಸಹಕಾರ ಸಂಘಗಳು ಇರಬಾರದು. ರಾಜಕೀಯ ಪ್ರೇರಿತವಾದರೆ ಸಹಕಾರ ಸಂಘಗಳು ಅವನತಿಯನ್ನು ಹೊಂದುತ್ತವೆ. ಸಹಕಾರ ರಂಗದಲ್ಲಿ ಆಧುನೀಕತೆ ಸ್ಪರ್ಶವಾಗಬೇಕಾಗಿದೆ. ಎಂಎನ್ ಸಿ ಬ್ಯಾಂಕ್ ಹಾಗೂ ಕಂಪೆನಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಸಹಕಾರಿ ಸಂಘಗಳನ್ನು ಉಳಿಸಿ, ಬೆಳೆಸುವ ಕಡೆಗೆ ಎಲ್ಲರೂ ಗಮನಹರಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ನಿರ್ದೇಶಕ ಜಿ.ಎನ್. ಸ್ವಾಮಿ, ಜಿ.ಎಸ್. ಸಂತೋಷ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಕೆ. ಬಸಪ್ಪ, ನೀರು ಬಳಕೆದಾರರ ಸಂಘದ ನಿರ್ದೆಶಕ ತೇಜಸ್ವಿ ವಿ. ಪಟೇಲ್, ಎಸ್.ಬಿ. ಶಿವಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಟಿ. ಮಧುಶ್ರೀನಿವಾಸ್, ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ವಿ. ವಿಜಯ ಉಪಸ್ಥಿತರಿದ್ದರು. ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು.
ಚನ್ನಗಿರಿಯ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ. ಶಿವಗಂಗಾ ಉದ್ಘಾಟಿಸಿದರು. ಜೆ.ಆರ್. ಷಣ್ಮುಖಪ್ಪ, ತೇಜಸ್ವಿ ಪಟೇಲ್ ಇದ್ದರು.