SUDDIKSHANA KANNADA NEWS/ DAVANAGERE/ DATE:24-03-2025
ಬೆಂಗಳೂರು: ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸಾರ್ವಭೌಮ ಎಂದು ಗೌರವಿಸುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನೇ ತಿದ್ದುಪಡಿ ಮಾಡಿದರೂ ಸರಿ ಮುಸ್ಲಿಮರಿಗೆ ಮೀಸಲಾತಿ ನೀಡುವುದೇ ನಮ್ಮ ಪ್ರಥಮ ಆದ್ಯತೆ, ದೇಶ, ಸಂವಿಧಾನಕ್ಕಿಂತ ಮುಸ್ಲಿಮರಿಗೆ ಮೀಸಲಾತಿ ಕೊಡುವುದು ನಮ್ಮ ಕರ್ತವ್ಯ” ಎಂಬ ಅರ್ಥದಲ್ಲಿ ರಾಷ್ಟ್ರೀಯ ವಾಹಿನಿಯೊಂದರ ಸಂದರ್ಶನದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಅವರು ಕಾಂಗ್ರೆಸ್ ನ ಮುಖ್ಯ ಅಜೆಂಡಾ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಚುನಾವಣೆಗಳಲ್ಲಿ ಬಿಜೆಪಿಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂವಿಧಾನ ಬದಲಾಯಿಸುತ್ತಾರೆ ಎಂಬ ವ್ಯವಸ್ಥಿತ ಅಪಪ್ರಚಾರ ನಡೆಸಿ ಶೋಷಿತ ಸಮುದಾಯಗಳಲ್ಲಿ ಗೊಂದಲವೆಬ್ಬಿಸಿ ಅಧಿಕಾರ ಕಬಳಿಸಲು ಕಸರತ್ತು ನಡೆಸಿದ್ದ ಕಾಂಗ್ರೆಸ್’ನ ಅಸಲಿ ಮುಖವಾಡ ಏನು ಎಂಬುದನ್ನು ಇಂದು ರಾಜ್ಯ ಹಾಗೂ ದೇಶದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.
ವಿಶೇಷವಾಗಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಸಮುದಾಯಗಳು ‘ಕಾಂಗ್ರೆಸ್ ಇರುವುದು ಮುಸ್ಲಿಮರ ಹಿತಕಾಯಲು ಮಾತ್ರ’ ಎಂಬ ವಾಸ್ತವ ಸ್ಥಿತಿಯನ್ನು ಅರಿಯಬೇಕಿದೆ. ಈಗಾಗಲೇ ಪರಿಶಿಷ್ಟರ ಕಲ್ಯಾಣ ಕಾರ್ಯಕ್ಕಾಗಿ ನಿಗದಿಯಾಗಿದ್ದ SCP-TSP ಹಣವನ್ನು ಕಾಂಗ್ರೆಸ್ ತನ್ನ ಬಿಟ್ಟಿ ಭಾಗ್ಯಗಳ ಯೋಜನೆಗೆ ಬಳಸಿಕೊಂಡು, ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕ್ಕೂ ಕನ್ನ ಹಾಕಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಕನಿಷ್ಠ ಮಟ್ಟದ ಅನುದಾನವನ್ನೂ ಬಿಡುಗಡೆ ಮಾಡದೆ ತಾನು
“ಹಿಂದು” ವಿರೋಧಿ ಎನ್ನುವುದನ್ನು ಸಾಬೀತುಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಇದೀಗ ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಂವಿಧಾನದ ಆಶಯಗಳನ್ನು ಮೂಲೆಗೆ ಸರಿಸಿ, ಸಂವಿಧಾನವನ್ನೇ ಬುಡಮೇಲು ಮಾಡಲು ಸಿದ್ದ ಎಂಬಂತೆ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ, ಸಂವಿಧಾನ ವಿರೋಧಿಗಳ್ಯಾರು? ಸಂವಿಧಾನವನ್ನು ಬದಲಾಯಿಸುವವರು ಯಾರು? ಸಂವಿಧಾನವನ್ನು ಇದುವರೆಗೂ ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದವರು ಯಾರು? ಎಂಬ ಪ್ರಶ್ನೆಗಳಿಗೆ ನಿಶ್ಚಿತವಾಗಿಯೂ ‘ಕಾಂಗ್ರೆಸ್’ ಎಂದು ಉತ್ತರ ಹೇಳಲೇಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಬಾಬಾ ಸಾಹೇಬರ ಸಿದ್ದಾಂತವಾದಿಗಳು ಎಂಬ ಮುಖವಾಡ ತೊಟ್ಟ ಕೆಲವರು ಹಿಂದುಳಿದ ಹಾಗೂ ಶೋಷಿತ ಸಮುದಾಯಗಳನ್ನು ದಿಕ್ಕು ತಪ್ಪಿಸಲು ಈವರೆವಿಗೂ ಭಾರತೀಯ ಜನತಾ ಪಾರ್ಟಿಯ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿದ್ದರು. ಇದೀಗ ಸ್ವತಃ ಡಿಕೆ ಶಿವಕುಮಾರ್ ಅವರೇ ಸಂವಿಧಾನ ತಿದ್ದುಪಡಿ ಮಾಡಿಯಾದರೂ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೇನೆ ಎಂದು ಹೇಳುವ ಮೂಲಕ ಸಂವಿಧಾನಕ್ಕೇ ಸವಾಲೊಡ್ಡುವ ಮಾತನಾಡಿದ್ದಾರೆ. ಇದಕ್ಕೆ ಪ್ರಗತಿಪರ ಹಾಗೂ ದಲಿತಪರ ಎಂದು ಹೇಳಿಕೊಳ್ಳುವ ಬುದ್ದಿಜೀವಿಗಳೆನಿಸಿಕೊಂಡವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಪರಿಶಿಷ್ಟ ಸಮುದಾಯ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳು ಈಗಲಾದರೂ ಕಾಂಗ್ರೆಸ್ ನಡೆ, ಅದರ ಚಿಂತನೆ ಹಾಗೂ ಅದರ ಧೋರಣೆಯನ್ನು ಅರಿತು ತಕ್ಕ ಪಾಠ ಕಲಿಸಲು ಮುಂದಾಗಬೇಕಿದೆ ಎಂದು ಮನವಿ ಮಾಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹೋರಾಟ ಈ ದೇಶದ ಪರಂಪರೆ, ಸಂಸ್ಕೃತಿ ರಕ್ಷಿಸಿ ಸಂವಿಧಾನದ ಆಶಯಗಳನ್ನು ಚಾಚೂ ತಪ್ಪದೇ ಜನರತ್ತ ಕೊಂಡೊಯ್ಯುವುದೇ ಆಗಿದೆ, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳು, ಯೋಜನೆಗಳೂ ದೇಶದ ಒಟ್ಟು ಅಭಿವೃದ್ಧಿ, ಜನಕಲ್ಯಾಣವನ್ನು ಕೇಂದ್ರೀಕರಿಸಿ ದೇಶದ ಜನರ ಹೃದಯಗೆದ್ದಿದೆ, ಕೇವಲ ಮುಸ್ಲಿಮರ ಕಲ್ಯಾಣವನ್ನು ಮಾತ್ರ ಕೇಂದ್ರೀಕರಿಸಿರುವ ಕಾಂಗ್ರೆಸ್ ವಿರುದ್ಧ ಪಾಠ ಕಲಿಸಲು ಜನತೆ ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ಇಲ್ಲದಿದ್ದರೆ ಭಾರತೀಯತೆ ಹಾಗೂ ಸಂವಿಧಾನ ಎರಡಕ್ಕೂ ಅಪಾಯ ತಂದೊಡ್ಡುವಲ್ಲಿ ಮುಂದಾಗಿರುವ ಕಾಂಗ್ರೆಸ್ ಗೆ ಈಗಲೇ ಅಂಕುಶ ಹಾಕದಿದ್ದರೆ ಮುಂದೊಂದು ದಿನ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಜನತೆ ಅರಿಯಬೇಕಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.